ಕೊಡಗು : ಜಿಲ್ಲೆಯಲ್ಲಿ ನಿರಂತರವಾಗಿ ಕೊರೋನ ಏರಿಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಬೇಕೆಂದು ಜಿಲ್ಲಾಡಳಿತಕ್ಕೆ ಕೊಡಗಿನ ವಿವಿಧ ಸಂಘಟನೆಗಳು ಮನವಿ ಮಾಡಿದೆ.
ಸೇವ್ ಕೊಡಗು ಫ್ರಮ್ ಟೂರಿಸಂ ಎಂಬ ಸಂಘಟನೆಯ ಪದಾಧಿಕಾರಿಗಳು ಕೊಡಗಿನ ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರವಾಸಿಗರಿಗೆ ನಿಷೇಧ ಹೇರುವಂತೆ ಮನವಿ ಮಾಡಿದ್ದಾರೆ.
ಈ ಮನವಿಗೆ ಕೊಡಗಿನ ಬೇರೆ ಸಂಘಟನೆಗಳು ಸಹ ಸಾಥ್ ನೀಡಿವೆ. ಕನಿಷ್ಟ ಪಕ್ಷ ಎರಡು ತಿಂಗಳಾದರೂ ಜಿಲ್ಲೆಗೆ ಪ್ರವಾಸಿಗರು ಬಾರದೇ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಮುಂದಿನ ತಿಂಗಳಿನಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಹಲವಾರು ಕಡೆಗಳಿಂದ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ವ್ಯಕ್ತಿಗಳು ಈ ಕುರಿತು ಹೆಚ್ಚಿನ ಗಮನ ನೀಡಿ ಮುಂದಾಗುವ ದೊಡ್ಡ ಅಪಾಯವನ್ನು ಈಗಲೇ ತಡೆಯುವ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಂಘಟನೆಯ ಸಂಚಾಲಕ ಚಮ್ಮಟಿರ ಪ್ರವೀಣ್ ಉತ್ತಪ್ಪ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಅಧಿಕ ಪ್ರತಿನಿಧಿಗಳು ಈ ಸಮಯದಲ್ಲಿ ಹಾಜರಿದ್ದರು.



0 Comments