ಹಾಸನದ ಸಕಲೇಶಪುರದಲ್ಲಿ ಕೆಎಸ್ಸಾರ್ಟಿಸಿ ಬಸ್ ಭೀಕರ ಅಪಘಾತವಾಗಿದ್ದು‌ ಪುಟ್ಟ ಮಕ್ಕಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ನಮ್ಮ ಚಿಕ್ಕಮಗಳೂರು ಎಂಬ ಫೇಸ್ಬುಕ್ ಪೇಜ್ ನಲ್ಲಿ ವೀಡಿಯೋ ಶೇರ್ ಮಾಡಲಾಗಿತ್ತು. ಆದರೆ ಈ ಘಟನೆಯ ಕುರಿತು ನ್ಯೂಸ್ ಮಲ್ನಾಡ್ ಫ್ಯಾಕ್ಟ್ ಚೆಕ್ ನಡೆಸಿದಾಗ ಇದು 2 ದಿನದ ಹಿಂದೆ ಕೋಲಾರದಲ್ಲಿ ನಡೆದ ಘಟನೆ ಎನ್ನುವ ಸತ್ಯಾಂಶ ಹೊರಬಿದ್ದಿದೆ.

ವೀಡಿಯೋ ಹಿಂದಿನ ಅಸಲಿ ಕಥೆ ಏನು?

ನಿನ್ನೆ ಕೋಲಾರದ ಚಿಂತಾಮಣಿ ರಸ್ತೆಯ ಶೆಟ್ಟಿಮಾದಮಂಗಲ ಗೇಟ್ ಬಳಿ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಕೋಲಾರದ ವಿನೋಭಾ ನಗರದ ರಾಜು (40) ಮತ್ತು ಅವರ ಮಗಳು ಬಿಂದು (8) ಮೃತಪಟ್ಟಿದ್ದರು. ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ರಾಜು ಅವರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಸಂಬಂಧಿಕರ ಮನೆಯಿಂದ ಮಗಳನ್ನು ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಕೋಲಾರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು.

ಕೋಲಾರದಿಂದ ಚಿಂತಾಮಣಿಗೆ ಹೋಗುತ್ತಿದ್ದ ಬಸ್‌ನ ಮುಂಭಾಗದ ಟಯರ್‌ ಸ್ಫೋಟಗೊಂಡಿದ್ದರಿಂದ ಬಸ್‌ ಅಡ್ಡಾದಿಡ್ಡಿ ಚಲಿಸಿ ಎದುರುಗಡೆಯಿಂದ ಬರುತ್ತಿದ್ದ ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದಿತ್ತು, ನಂತರ ಸರಕು ಸಾಗಣೆ ವಾಹನದ ಹಿಂಭಾಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿತ್ತು. ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಅಶೋಕ್‌ ಅವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತಕ್ಕೀಡಾದ ಬಸ್‌ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದರು. ಈ ಪೈಕಿ 7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅಪಘಾತದ ತೀವ್ರತೆಗೆ ಬಸ್‌, ಸರಕು ಸಾಗಣೆ ವಾಹನ ಹಾಗೂ ದ್ವಿಚಕ್ರ ವಾಹನ ನಜ್ಜುಗುಜ್ಜಾಗಿವೆ. ಆದರೆ ವೀಡಿಯೋವನ್ನು ಸಕಲೇಶಪುರದಲ್ಲಿ ನಡೆದ ಭೀಕರ ಅಪಘಾತ ಎಂದು ನಮ್ಮ ಚಿಕ್ಕಮಗಳೂರು ಎಂಬ ಪೇಜ್ ನಲ್ಲಿ ಶೇರ್ ಮಾಡಲಾಗಿತ್ತು.