ನರಸಿಂಹರಾಜಪುರ:(ನ್ಯೂಸ್ ಮಲ್ನಾಡ್ ವರದಿ) ಶಾಲೆಗಳು ಆರಂಭವಾದ ಹಿನ್ನೆಲೆ ತಾಲೂಕಿನ ಅಳಲಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 28 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 200 ಮಕ್ಕಳಲ್ಲಿ 28 ಮಕ್ಕಳಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 19 ಬಾಲಕರು ಮತ್ತು 9 ಜನ ಬಾಲಕಿಯರು ಎಂಬ ಮಾಹಿತಿ ತಿಳಿದುಬಂದಿದೆ.

ಕೋವಿಡ್ ವರದಿ ದೃಢಪಟ್ಟಿರುವುದರಿಂದ ಶಾಲೆಯಲ್ಲಿ ಕೋವಿಡ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ, ಮಕ್ಕಳ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಹಾಗೂ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲು ಮಕ್ಕಳ ತಜ್ಞ ಡಾ. ಪ್ರಭು ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಶಾಸಕ ಟಿ. ಡಿ. ರಾಜೇಗೌಡ  ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು,ಜ್ವರ ಕಾಣಿಸಿಕೊಂಡಿರುವ ಎಲ್ಲಾ ಮಕ್ಕಳಿಗೂ ರಕ್ತ ಪರೀಕ್ಷೆ ನಡೆಸಲು ವೈದ್ಯರಿಗೆ ಸೂಚಿಸಿದರು. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ, ನಮ್ಮಲ್ಲಿ ಎಲ್ಲಾ ರೀತಿಯ ಅಗತ್ಯ ಆರೋಗ್ಯ ಸೌಲಭ್ಯಗಳ ಲಭ್ಯತೆ ಇದೆ ಎಲ್ಲರೂ ಧೈರ್ಯದಿಂದ ಇರುವಂತೆ ತಿಳಿಸಿದರು.

ಸ್ಥಳದಲ್ಲಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ. ವೀರಪ್ರಸಾದ್,  ತಾಲ್ಲೂಕು ಪಂಚಾಯಿತಿ ಇಒ ನಯನಾ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರಗಪ್ಪ, ಪ್ರಾಂಶುಪಾಲ ಕೃಷ್ಣಮೂರ್ತಿ, ಮೆಣಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಾಥ್, ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ. ಆರ್ ಸದಾಶಿವ, ಮುಂತಾದವರು ಇದ್ದರು.