ಕಳೆದ ಒಂದೂವರೆ ವರ್ಷದಿಂದ ಸುದೀರ್ಘವಾಗಿ ಸುಸಜ್ಜಿತವಾದ 100 ಬೆಡ್ ಆಸ್ಪತ್ರೆಗಾಗಿ ಹೋರಾಟ ನಡೆಸಿದ ಶೃಂಗೇರಿಯ ಯುವಕರ ಗುಂಪು ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ ಸಾರ್ವಜನಿಕರಿಂದ ಸಂಘ ಸಂಸ್ಥೆಗಳಿಂದ ಮಾತ್ರವಲ್ಲದೆ ರಾಜಕೀಯ ಪಕ್ಷಗಳಿಂದಲೂ ಬೆಂಬಲ ಸಿಕ್ಕಿದೆ.

ರಾಜಕೀಯೇತರ ಹೋರಾಟ:

ಈ ಹೋರಾಟವು ಸಂಪೂರ್ಣ ರಾಜಕೀಯೇತರವಾಗಿದ್ದು, ಊರಿಗೆ ಬೇಕಾದ ಸುಸಜ್ಜಿತ ಆಸ್ಪತ್ರೆ ಅನಿವಾರ್ಯತೆ ಇದ್ದು ಇದಕ್ಕಾಗಿ ಸಾರ್ವಜನಿಕರು ಮತ್ತು ವಿವಿಧ ರಾಜಕೀಯ ಪಕ್ಷದಲ್ಲಿರುವ ಸಮಾನ ಮನಸ್ಕರು ಒಟ್ಟಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆ. ಇದಕ್ಕೆ ಸಮಾಜದ ಎಲ್ಲಾ ಸಂಘಟನೆಗಳು, ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ಈ ಬಂದ್ ನ್ನು ಯಶಸ್ವಿಗೊಳಿಸಲು ಕೈಜೋಡಿಸುವ ಮೂಲಕ ಶೃಂಗೇರಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ನೂರು ಬೆಡ್ ಆಸ್ಪತ್ರೆ ಸಮಿತಿಯ ಸಂಘಟಕರು ಮನವಿ ಮಾಡಿದ್ದರು. ಈಗ ಸಂಘಟಕರ ಮನವಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಬರೋಬ್ಬರಿ 30ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿವೆ.

ವಿಶೇಷ ಎಂದರೆ ಶೃಂಗೇರಿಯ ಹಳ್ಳಿ ಭಾಗಗಳಲ್ಲಿ ಸಹ ವ್ಯಾಪಕ ಬೆಂಬಲ ದೊರಕಿದ್ದು ಹಳ್ಳಿಗಳೂ ಸಹ ಬಂದ್ ಆಗಲಿವೆ.

ಇದುವರೆಗೂ ಬೆಂಬಲ ನೀಡಿರುವ ಸಂಘಟನೆಗಳು.

1) ದಲಿತ ಸಂಘರ್ಷ ಸಮಿತಿ

2) ಬಜರಂಗದಳ

3) ರೈತ ಸಂಘ

4) ಆಟೋ ಚಾಲಕರು ಮತ್ತು ಮಾಲೀಕರ ಸಂಘ

5) ಬಂಟರ ಸಂಘ

6) ವಾಹನ ಮಾಲೀಕರು ಮತ್ತು ಚಾಲಕರ ಸಂಘ

7) ಆರ್ಯ ಈಡಿಗ ಸಂಘ

8) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

9) ಬಿಲ್ಲವ ಸಂಘ

10) ಒಕ್ಕಲಿಗರ ಯುವ ವೇದಿಕೆ

11) ಯುವ ವಿಪ್ರ ವೇದಿಕೆ

12) ಬ್ರಾಹ್ಮಣ ಮಹಾಸಭಾ

13) ವಕೀಲರ ಸಂಘ

14) ಕರ್ನಾಟಕ ಜನಶಕ್ತಿ

15) ಬಿಜೆಪಿ ಯುವಮೋರ್ಚಾ

16) ಭಾರತೀಯ ಜನತಾ ಪಕ್ಷ

17) ಯೂತ್ ಕಾಂಗ್ರೆಸ್

18) ಜನತಾದಳ(ಜಾತ್ಯಾತೀತ)

19) ಅಸಂಘಟಿತ ಕಾರ್ಮಿಕರ ಪ್ರಕೋಷ್ಠ(ಬಿಜೆಪಿ)

20) ಯುವ ರೈತ ಸೇನೆ, ಶೃಂಗೇರಿ

21) ಶ್ರೀ ಭಾರತೀ ತೀರ್ಥ ಯೂತ್ ಆಂಡ್ ಸ್ಪೋರ್ಟ್ಸ್ ಕ್ಲಬ್

22) ಸವಿತಾ ಸಮಾಜ

23) ಮಹಿಳಾ ಮನೆ ಸಂಘ

24) ಲಾರಿ ಮಾಲೀಕರು ಮತ್ತು ಚಾಲಕರ ಸಂಘ

25) ಶ್ರೀ ವಿಶ್ವ ಭಾರತೀಯ ಸೇವಾ ಟ್ರಸ್ಟ್

26) ಶ್ರೀರಾಮಸೇನೆ

27) ಅಂಗನವಾಡಿ ಕಾರ್ಯಕರ್ತೆಯರ ಸಂಘ

28) ಮಾರ್ವಾಡಿಗಳ ಸಂಘ

29) ಕಾರ್ಮಿಕರ ಸಂಘ ಗ್ರೂಪ್

30) ಟೈಲರ್ ಸಂಘ

31) ವರ್ತಕರ ಸಂಘ

32) ಡಿ.ಸಿ.ಸಿ ಬ್ಯಾಂಕ್

33) ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ

ಸೇರಿದಂತೆ ಇನ್ನೂ ಹಲವು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.

ಶೃಂಗೇರಿಯಂತ ಪುಣ್ಯ ಕ್ಷೇತ್ರಕ್ಕೆ ವರ್ಷದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಆದರೆ ಇಲ್ಲೊಂದು ಸುಸಜ್ಜಿತ ಆಸ್ಪತ್ರೆಯಿಲ್ಲ. ದುಡ್ಡಿದ್ದವನು ಮಣಿಪಾಲ್, ಇಲ್ಲದವನು ಮಣ್ಣುಪಾಲು ಎಂಬುದು ನಮ್ಮೂರಿನ ಗಾದೆ ಮಾತಾಗಿದೆ. ಸುಸಜ್ಜಿತ ಆಸ್ಪತ್ರೆಗಾಗಿ ಒಂದಲ್ಲ 4 ದಿನವಾದರೂ ಅಂಗಡಿಗಳನ್ನು ಮುಚ್ಚುತ್ತೇವೆ. - ಹವಲ್ದಾರ್ ನಾವಾಝ್, ವ್ಯಾಪಾರಸ್ಥ (ನಿವೃತ್ತ ಭಾರತೀಯ ಸೈನಿಕ)

ಬಸ್, ವಾಹನಗಳು ಸಹ ಇರುವುದಿಲ್ಲ:

ತುರ್ತು ವಾಹನಗಳು ಹೊರತುಪಡಿಸಿ ಸರ್ಕಾರಿ ಹಾಗೂ ಖಾಸಗೀ ಬಸ್ ಗಳು ಹಾಗೂ ಎಲ್ಲಾ ತರಹದ ವಾಹನ ಸಂಚಾರ ಸಹ ಸಂಪೂರ್ಣ ಬಂದ್ ಆಗಲಿವೆ.

ಪ್ರಮುಖ ಬೇಡಿಕೆಗಳೇನು?

1. ಕೂಡಲೇ 100 ಬೆಡ್ ಆಸ್ಪತ್ರೆ ಜಾಗ ಮಂಜೂರಾತಿ ಸಮಸ್ಯೆ ಬಗೆಹರಿಸಿ ಆರೋಗ್ಯ ಇಲಾಖೆಗೆ ಜಾಗ ಮಂಜೂರು ಮಾಡುವುದು, ಹಾಗೂ 100 ಬೆಡ್ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡುವುದು.

2. ಪ್ರಸ್ತುತ ಈಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ, ಎಂಡೊಸ್ಕೋಫಿ, ಹಾಗೂ ಸಿ.ಟಿ ಸ್ಕ್ಯಾನ್ ಮೆಷಿನ್ ಸೌಲಭ್ಯ ಒದಗಿಸುವುದು.

ಸತತ ಒಂದೂವರೆ ವರ್ಷದ ಹೋರಾಟ

2007 ನೆಯ ಇಸವಿಯಲ್ಲಿ ಶೃಂಗೇರಿ ತಾಲೂಕು ಆರೋಗ್ಯ ಕೇಂದ್ರವನ್ನು 100 ಬೆಡ್ ಆಸ್ಪತ್ರೆಯ ನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಆದೇಶ ಹೊರಡಿಸಿದ್ದರೂ ಕೂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗದ ಕೊರತೆಯ ನೆಪ ಹೇಳಿಕೊಂಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪೂರ್ಣ ಮಾಡಿಲ್ಲ ಕಳೆದ ವರ್ಷ ಜೂನ್ ನಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿ ತಿಳಿಸಿದೆ.

ಶೃಂಗೇರಿ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿರುವ ಊರಾಗಿದ್ದು ಅಕ್ಕ ಪಕ್ಕದ ತಾಲೂಕಿನ ಕನಿಷ್ಟ 10 ಸಾವಿರ ಜನರಿಗೆ ಶೃಂಗೇರಿಯು ಹತ್ತಿರ ಕೇಂದ್ರವಾಗಿದೆ, ವರ್ಷಕ್ಕೆ ಸರಾಸರಿ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಹೀಗಿದ್ದರೂ ಕೂಡ ಈ ಕ್ಷೇತ್ರಕ್ಕೆ ಸುಸಜ್ಜಿತವಾದ ನೂರು ಬೆಡ್ ಆಸ್ಪತ್ರೆ ಇಲ್ಲದೇ ಇರುವುದು ವಿಷಾದನೀಯ ಸಂಗತಿ.

ಈಗಿರುವ ಆಸ್ಪತ್ರೆಯಲ್ಲಿ ಯಾವುದೇ ಅತ್ಯಾಧುನಿಕ ಸಲಕರಣೆಗಳು ಹಾಗೂ ಸುಸಜ್ಜಿತ ಸೌಲಭ್ಯಗಳು ಇಲ್ಲದ ಕಾರಣ ತೀವ್ರ ತರಹದ ಅನಾರೋಗ್ಯ, ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ಶೃಂಗೇರಿಯಿಂದ ಸುಮಾರು 100 ಕಿ.ಮೀ ದೂರದ ಊರಿನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಬೇಕಿದೆ. ಬಹುಪಾಲು ಜನರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದರೆ ಉಳಿದವರು ಹಣದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂದು 100 ಬೆಡ್ ಆಸ್ಪತ್ರೆಯ ಹೋರಾಟ ಸಮಿತಿಯು ಜನರ ಸಂಕಷ್ಟಗಳನ್ನು ವಿಸ್ಕೃತವಾಗಿ ವಿವರಿಸಿದೆ.

ಇದರ ಹಿಂದೆ ಮೆಡಿಕಲ್ ಮಾಫಿಯಾ ಒತ್ತಡ ಇರುವ ಬಗ್ಗೆಯೂ ಸಹ ಸಾಕಷ್ಟು ಅನುಮಾನವಿದೆ, ಆ ಕಾರಣಕ್ಕಾಗಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ ಎಂಬ ಅನುಮಾನವಿದೆ ಮತ್ತು ರಾಜಕೀಯ ಒತ್ತಡ ಕೆಲಸ ಮಾಡುತ್ತಿರುವ ಸಾಧ್ಯತೆಯೂ ಇದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಇದೊಂದು ಸಂಪೂರ್ಣ ರಾಜಕೀಯೇತರ ಹೋರಾಟವಾಗಿದ್ದು ಸಮಾನ ವಯಸ್ಕ ಯುವಕರು ಸೇರಿ ಈ ಬಂದ್ ಗೆ ಕರೆ ನೀಡಿದ್ದೇವೆ. ಯಾವುದೇ ಪಕ್ಷದ ರಾಜಕೀಯ ಮುಖಂಡರು ಆರೋಪ ಪ್ರತ್ಯಾರೋಪ ಮಾಡಿದರೂ ಅದಕ್ಕೆ ಹೋರಾಟ ಸಮಿತಿ ಜವಾಬ್ದಾರಿಯಲ್ಲ ಹಾಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ಮಂಜೂರಾತಿ ಆದೇಶ ಹೊರಡಿಸುವವರೆಗೂ ಹೋರಾಟ ನಿಲ್ಲುವುದಿಲ್ಲ, ಅಲ್ಲಿಯವರೆಗೂ ಆಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಹೋರಾಟ ಸಮಿತಿ ತಿಳಿಸಿದೆ.