ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ಟೋಬರ್ 8ನೇ ತಾರೀಖಿನಂದು ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪೂರ್ವ ತಯಾರಿ ನಡೆಸುತ್ತಿದ್ದು ಈ ಒಂದು ದಿನದ ಖಾಸಗೀ ಭೇಟಿಗೆ ವ್ಯವಸ್ಥೆಯ ಹಾಗೂ ರಕ್ಷಣೆಯ ದೃಷ್ಟಿಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.

ಶೃಂಗೇರಿಯ ಗಾಂಧಿ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದ್ದು, ಎಡೆಬಿಡದೆ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣದಿಂದ ಗಾಂಧಿ ಮೈದಾನದ ವ್ಯಾಪಾರಸ್ಥರು ಸಹ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿದ್ದಾರೆ. ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿರುವುದಾಗಿ ವ್ಯಾಪಾರಸ್ಥರು ಹೇಳಿದ್ದಾರೆ.

ಆದರೆ ಕಳೆದ ಎರಡು ವರ್ಷದಿಂದ ಕೊರೋನಾದಿಂದಾಗಿ ವ್ಯಾಪಾರ ವ್ಯವಹಾರ ಇಲ್ಲದೇ ನಷ್ಟದಲ್ಲಿದ್ದವರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಮತ್ತೊಂದೆಡೆ ಪಟ್ಟಣ ಪಂಚಾಯಿತಿ ವತಿಯಿಂದ ಹೊಸದಾಗಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದ್ದು, ಮೊದಲೇ ಆದಾಯವಿಲ್ಲದ ಶೃಂಗೇರಿ ಪಟ್ಟಣ ಪಂಚಾಯಿತಿಗೆ ನಷ್ಟವನ್ನು ತುಂಬಿಕೊಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆಯಾ ನೋಡಬೇಕಿದೆ.

ಮರಗಳಿಗೆ ಕತ್ತರಿ:

ಭೇಟಿಯ ತಯಾರಿಯ ಪೂರ್ವಭಾವಿ ಸಭೆಯ ನಿರ್ಧಾರದಂತೆ ಹೆಲಿಪ್ಯಾಡ್ ನಿರ್ಮಾಣ ದೃಷ್ಟಿಯಿಂದ ಗಾಂಧಿ ಮೈದಾನದಲ್ಲಿ ಇರುವ ಮರಗಳನ್ನು ಕಡಿಯಲು ಅನುಮತಿಸಲಾಗಿದ್ದು, ಕಟಾವು ಕಾರ್ಯ ನಡೆಯುತ್ತಿದೆ. ಆದರೆ ಪರ್ಯಾಯವಾಗಿ ಯಾವುದೇ ಗಿಡಗಳನ್ನು ನೆಡುವ ಕಾರ್ಯ ಮಾಡಿಲ್ಲ.

ಹೆಲಿಪ್ಯಾಡ್ ಅಭಿವೃದ್ಧಿಗೊಳಿಸಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ:

ಶೃಂಗೇರಿಯ ಖಾಯಂ ಹೆಲಿಪ್ಯಾಡ್ ಅಭಿವೃದ್ಧಿಗೊಳಿಸಿದರೆ ಅಲ್ಲಿಯೇ ಎಲ್ಲಾ 3 ಹೆಲಿಕಾಪ್ಟರ್ ಇಳಿಸಬಹುದು, ಆದರೆ ಅದರೆಡೆಗೆ ನಿರ್ಲಕ್ಷ್ಯವಹಿಸಿ ಈಗ ತಾತ್ಕಾಲಿಕ ಹೆಲಿಪ್ಯಾಡ್ ಗೆ ಹಣ ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಹಣದ ದುಂದುವೆಚ್ಚ ಎಂದೇ ಹೇಳಬಹುದು. ಮೋರಿ ಅನುದಾನದ ಬ್ಯಾನರ್ ರಾಜಕೀಯದಲ್ಲಿ ಕಿತ್ತಾಡುವ ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಿದ್ದರೆ ಈ ನಷ್ಟವನ್ನು ತಡೆಗಟ್ಟಬಹುದಿತ್ತು.

ಪ್ರವಾಸಿಗರಿಗೆ ಸೂಚನೆ:

8ರ ಭೇಟಿ ಹಿನ್ನಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ದಿನಾಂಕ 07 ಹಾಗೂ 08ನೇ ತಾರೀಖಿನಂದು ಶ್ರೀ ಮಠದ ಆವರಣದ ಒಳಗೆ ಹಾಗೂ ಪಟ್ಟಣದಲ್ಲಿ ಹಲವು ನಿಯಮಗಳು ಜಾರಿಯಲ್ಲಿ ಇರುವುದರಿಂದ ಭಕ್ತಾದಿಗಳಿಗೆ ದರ್ಶನ ಭಾಗ್ಯ ಅನುಮಾನ. ಆ ಕಾರಣ ಪ್ರವಾಸಿಗರು ತಮ್ಮ ಯೋಜನೆಗಳನ್ನು ಬದಲಾಯಿಸುವುದು ಸೂಕ್ತ.

ದೊಡ್ಡವರ ಭೇಟಿಗೆ ಮಳೆಯ ಅಸಮ್ಮತಿ:

ಅದೇಕೋ ಮಳೆಯೂ ರಾಷ್ಟ್ರಪತಿಗಳ ಖಾಸಗಿ ಭೇಟಿಗೆ ಅಸಮ್ಮತಿ ಸೂಚಿಸಿದಂತೆ ಕಾಣುತ್ತಿದೆ, ಶಾಹಿನ್ ಚಂಡಮಾರುತ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು 8ನೇ ತಾರೀಖು ಸುಗಮ ಭೇಟಿಗೆ ಮಳೆಯು ಗ್ರೀನ್ ಸಿಗ್ನಲ್ ಕೊಡುವುದು ಅನುಮಾನವಾಗಿದೆ.