ಕೊಪ್ಪ : ರೈತರು ಸೊಸೈಟಿಗಳನ್ನು ನಂಬಿ ತಮ್ಮ ಕೃಷಿ ಚಟುವಟಿಕೆಗಳಿಗೆ ಗೊಬ್ಬರ ಖರೀದಿಸುತ್ತಾರೆ, ಅಡಿಕೆ, ಕಾಫಿ, ಭತ್ತ, ಕಾಳು ಮೆಣಸು ಸೇರಿ ಬಹುತೇಕ ಎಲ್ಲಾ ಬೆಳೆಗಳಿಗೆ ಬೇಸಾಯದ ಸಮಯದಲ್ಲಿ ಗೊಬ್ಬರ ಹಾಕಲಾಗುತ್ತದೆ. ಇದರಿಂದ ಇಳುವರಿ ಜಾಸ್ತಿಯಾಗುತ್ತದೆ ಮತ್ತು ಫಸಲು ನಿಲ್ಲುತ್ತದೆ ಎಂಬ ನಂಬಿಕೆ ರೈತನದು. ಹಾಗಾಗಿಯೇ ಒಂದು ಮೂಟೆಗೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ, ಸಾಲ ಮಾಡಿಯಾದರೂ ಗೊಬ್ಬರ ಕೊಂಡುಕೊಳ್ಳುತ್ತಾರೆ.
ಇದರಲ್ಲಿ ರೈತರು ಗೊಬ್ಬರದ ಕಂಪನಿ, ಸೊಸೈಟಿ, ಸರ್ಕಾರವನ್ನು ನಂಬುತ್ತಾರೆ. ಆದರೆ ನಂಬಿದವರೇ ದ್ರೋಹ ಬಗೆದರೆ ಏನು ಮಾಡುವುದು.? ಅಂತಹುದೇ ಭಾರೀ ಗೋಲ್ ಮಾಲ್ ಒಂದು ಹೊರ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರುಕೊಡಿಗೆ ಹಾಗೂ ಶೃಂಗೇರಿಯ ತೆಕ್ಕೂರು ಸೊಸೈಟಿ ಯಲ್ಲಿ ರಸಗೊಬ್ಬರ ಕೊಂಡುಕೊಂಡು ಕೃಷಿ ಚಟುವಟಿಕೆಗೆ ಬಳಕೆ ಮಾಡಿದವರು ಈಗ ರಸಗೊಬ್ಬರ ಕಂಪನಿ ಹಾಗೂ ಸೊಸೈಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ರಸಗೊಬ್ಬರ ಖರೀದಿಸಲಾಗಿತ್ತು, ಆದರೆ ಗೊಬ್ಬರ ಸಿಂಪಡಣೆ ಮಾಡಿದ ನಂತರ ಗಿಡಗಳ ಬೆಳವಣಿಗೆಯಲ್ಲಿ ಯಾವುದೇ ಬದಲಾವಣೆ ಕಾಣದಿರುವುದು ಹಾಗೂ ಎಷ್ಟು ಮಳೆ ಸುರಿದರೂ ಗೊಬ್ಬರ ಮಣ್ಣಿನಲ್ಲಿ ಕರಗದೇ ಇರುವುದು ನೋಡಿ ರೈತರು ಅನುಮಾನಕ್ಕೆ ಒಳಗಾಗಿದ್ದಾರೆ.
ಕೊಣೆಕೊಪ್ಪ ಪ್ರದೀಪ್ ಎಂಬ ಕೃಷಿಕರು ಈ ಬಗ್ಗೆ ಹಲವು ಬಾರಿ ಹೆಗ್ಗಾರುಕೊಡಿಗೆ ಸೊಸೈಟಿಗೆ ದೂರು ನೀಡಿದರೂ ಬೇಜವಾಬ್ದಾರಿ ತೋರಿದ ಕಾರಣ, ಅನುಮಾನಗೊಂಡು ಲ್ಯಾಬ್ ಗೆ ಕಳಿಸಿ ಗೊಬ್ಬರದ ಗುಣಮಟ್ಟ ಚೆಕ್ ಮಾಡಿಸಿದ್ದಾರೆ. ಗುಣಮಟ್ಟ ಪರಿಶೀಲನೆ ನಂತರ ಬಂದ ರಿಪೋರ್ಟ್ ನೋಡಿ ಪ್ರದೀಪ್ ಹಾಗೂ ರೈತರು ನಿಜಕ್ಕೂ ಆಘಾತಕ್ಕೊಳಗಾಗಿದ್ದಾರೆ. ಶೇ 17:17:17 ರಷ್ಟು ಅನುಪಾತ ಇರಬೇಕಾದ ಗೊಬ್ಬರ ಕೇವಲ 5.2 :4.0 :3.8 ಮಾತ್ರ ಇರುತ್ತದೆ.
ಇದರಿಂದ ತಮಗೆ ಮೋಸವಾಗಿರುವುದನ್ನು ಅರಿತ ರೈತರು ಸೊಸೈಟಿ ಮುಂದೆ ಪ್ರತಿಭಟನೆಗೆ ಕೂರುವುದಾಗಿ ಹೇಳಿದ ನಂತರ ಗೊಬ್ಬರ ಕಂಪನಿ ಮುಖ್ಯಸ್ಥರು ಪ್ರದೀಪ್ ಅವರಿಗೆ ಕರೆ ಮಾಡಿ ತಾನು ಬಂದು ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಆದರೆ ತನಗೆ ಮಾತ್ರ ಪರಿಹಾರದ ಭರವಸೆ ಬೇಡ, ಒಟ್ಟಾರೆ ಸಾವಿರಾರು ಮೂಟೆ ಮಾರಾಟವಾಗಿದೆ, ಇದರಿಂದ ಈ ಭಾಗದ ಎಲ್ಲಾ ರೈತರಿಗೆ ಅನ್ಯಾಯವಾಗಿದ್ದು ಸೂಕ್ತ ತನಿಖೆ ನಡೆದು ಅಕ್ರಮ ಎಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಷ್ಟಕ್ಕೆ ಒಳಗಾಗಿರುವ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಪ್ರದೀಪ್ ಒತ್ತಾಯಿಸಿದ್ದಾರೆ.



0 Comments