ಚಿಕ್ಕಮಗಳೂರು:( ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಹಿಂದೆ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬಂಧಿತನಾಗಿದ್ದ ಅರೋಪಿಯೋರ್ವ ಲಾಕಾಪ್ ನಿಂದ ಎಸ್ಕೇಪ್ ಆಗಿದ್ದ ಘಟನೆ ನಡೆದಿತ್ತು , ನಂತರದಲ್ಲಿ ಪೊಲೀಸರು ಆರೋಪಿಯನ್ನು ಹುಡುಕಿ ಸೆರೆ ಹಿಡಿದು ಬಂಧನ ಮಾಡಿದ್ದರು. ಈ ಘಟನೆಯ ಕುರಿತಾಗಿ ಪೊಲೀಸರ ಮೇಲೆ ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ನಾಲ್ವರು ಪೊಲೀಸರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಿಜಾಮ್ ಎಂಬ ಆರೋಪಿ, ಹನ್ನೆರಡು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಡಿಯಲ್ಲಿ ಆತನನ್ನು ಪೊಲೀಸರು ಬಂಧಿಸಿ ಬಾಳೆಹೊನ್ನೂರು ಪೊಲೀಸ್ ಠಾಣೆಯ ಸೆಲ್ ನಲ್ಲಿರಿಸಿದ್ದರು. ಠಾಣೆಯಲ್ಲಿ ಅಧಿಕಾರಿಗಳು ಇಲ್ಲದ ಸಮಯವನ್ನು ನೋಡಿಕೊಂಡು ಆರೋಪಿಯು ಅಲ್ಲಿಂದ ಎಸ್ಕೇಪ್ ಆಗಿದ್ದ, ವಿಷಯ ತಿಳಿದ ನಂತರದಲ್ಲಿ ಪೊಲೀಸ್ ಸಿಬ್ಬಂದಿಗಳು ಆತನನ್ನು ಪುನಃ ಸೆರೆ ಹಿಡಿದಿದ್ದರು.
ಆರೋಪಿಯು ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿರುವುದು ಇಲಾಖೆಯ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ತಲೆ ತಗ್ಗಿಸುವಂತಹುದ್ದು, ಆದ ಕಾರಣ ಘಟನಾ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳಾದ ಎ.ಎಸ್.ಐ ಪದ್ಮಾಕ್ಷ್ಯ, ರಘುವೀರ್, ಸಂತೋಷ್,ಬಸಂತ್ ಕುಮಾರ್ ಎಂಬ ನಾಲ್ವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

0 Comments