ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಆರ್ ಅಭಿಲಾಶ್ ಆಯ್ಕೆಗೊಂಡಿದ್ದಾರೆ.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎ.ಆರ್. ಅಭಿಲಾಷ್ ಅವಿರೋಧವಾಗಿ ಇಂದು ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಎಂ. ಭರತ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು. ಬಳಿಕ ನಡೆದ ನೂತನ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಭಿಲಾಶ್ ಮಾತನಾಡಿ, ರೈತರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದೊರೆಯುವ ಸಾಲ ಮತ್ತಿತರ ಕೃಷಿ ಸೌಲಭ್ಯವನ್ನು ಪಡೆದು ಕೃಷಿ ಆದಾಯ ಹೆಚ್ಚಿಸಿಕೊಳ್ಳಬೇಕು. ರೈತರು ಸಹಕಾರಿ ಸಂಘದ ಸದುಪಯೋಗ ಪಡೆದು ಪರಿಣಾಮಕಾರಿ ಕೃಷಿ ಮಾಡಬಹುದು. ಈ ನಿಟ್ಟಿನಲ್ಲಿ ಸಿಕ್ಕಿರುವ ಅವಧಿಯಲ್ಲಿ ಪಕ್ಷಾತೀತವಾಗಿ ಎಲ್ಲರ ಸಹಕಾರದಿಂದ ಸೇವೆ ನೀಡುವುದಾಗಿ ಹೇಳಿದರು.
ಮಾಜಿ ಅಧ್ಯಕ್ಷ ಬಿ.ಎಂ.ಭರತ್ ಮಾತನಾಡಿ ಬಣಕಲ್ ನಲ್ಲಿ ರೈತರಿಗೆ ಉತ್ತಮ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ವಾಗಿದ್ದು ಉತ್ತಮ ಸೌಲಭ್ಯವನ್ನು ರೈತರಿಗೆ ನೀಡುತ್ತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ಸಹಕಾರಿ ಕ್ಷೇತ್ರ ಉತ್ತಮ ಕ್ಷೇತ್ರವಾಗಿದ್ದು, ನೂತನ ಅಧ್ಯಕ್ಷರು ಕೂಡ ರೈತರ ಕೃಷಿ ಜೀವನ ಸುಧಾರಿಸಲು ಸಹಕಾರ ನೀಡಬೇಕು ಎಂದರು. ಈ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಿಗೆ ಹೂವಿನ ಹಾರ ಹಾಕಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಿಜೆಪಿ ಹೋಬಳಿ ಅಧ್ಯಕ್ಷ ಅನುಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಧನಿಕ್, ಬಿಜೆಪಿ ಮುಖಂಡ ಮನೋಜ್, ಸಂಜಯ್ ಗೌಡ, ಬಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜು, ಸಂಘದ ಉಪಾಧ್ಯಕ್ಷ ರಮೇಶ್, ನಿರ್ದೇಶಕರುಗಳಾದ ಬಿ.ಎಸ್. ವಿಕ್ರಂ, ರಂಗನಾಥ್, ಟಿ.ಎಂ. ಗಜೇಂದ್ರ, ಬಿ.ಎಸ್. ಕಲ್ಲೇಶ್, ಶಾಮಣ್ಣ ಬಣಕಲ್, ಶೇಖರ್ ದಿಲ್ದಾರ್ ಬೇಗಮ್, ಪ್ರದೀಪ್ ಬಿನ್ನಡಿ, ಮಮತಾ, ನಾರಾಯಣಗೌಡ, ಜೆ.ಬಿ.ಲಕ್ಷ್ಮಿ ಪಿಸಿಎಸ್ ಬ್ಯಾಂಕ್ ಸಿಇಓ ನಿಶಾಂತ್, ಪರೀಕ್ಷಿತ್ ಜಾವಳಿ, ಚುನಾವಣಾ ಅಧಿಕಾರಿಗಳು ಮುಂತಾದವರು ಇದ್ದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments