ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಕೊಟ್ಟಿಗೆಹಾರದ ಕೂವೆ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ಗಬ್ಗಲ್ ನ ಸರ್ವೇ ನಂಬರ್ 163 ರಲ್ಲಿ ನಿವೇಶನ ರಹಿತರು ಟೆಂಟ್ ನಿರ್ಮಿಸಿ ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿದರು.

ಗಬ್ಗಲ್ ನ ಸರ್ವೇ ನಂಬರ್ 163 ರಲ್ಲಿ ಬೆಳೆದಿದ್ದ ಗಿಡ ಹಾಗೂ ಪೊದೆಗಳನ್ನು ಕಡಿದು ಸುಮಾರು ಇನ್ನೂರಕ್ಕೂ ಅಧಿಕ ನಿರಾಶ್ರಿತರು ಪ್ರತಿಭಟನೆ ನಡೆಸಿದರು. ಸರ್ಕಾರದ ಭೂಮಿಯನ್ನು ದೊಡ್ಡ ದೊಡ್ಡ ಶ್ರೀಮಂತರು, ಉಳ್ಳವರು ಪಡೆದುಕೊಳ್ಳುತ್ತಿದ್ದಾರೆ. ಶೀಘ್ರವಾಗಿ ಒತ್ತುವರಿಯಾದ ಬಿಲ್ಡಿಂಗ್ ಗಳನ್ನು ತೆರವುಗೊಳಿಸಿ ಬಡವರಿಗೆ ಹಾಗೂ ಅಸಹಾಯಕರಿಗೆ ಶೀಘ್ರವಾಗಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಸರ್ವೇ ನಂ 163 ಮತ್ತು 21 ರಲ್ಲಿ ವಸತಿ ರಹಿತರಿಗೆ ಶೀಘ್ರವಾಗಿ ವಸತಿ ನೀಡಬೇಕು ಎಂದು ಪ್ರತಿಭಟನೆ ಮಾಡಿದರು.

ಸ್ಥಳಕ್ಕೆ ರಾಜಸ್ವ ನಿರೀಕ್ಷಕರಾದ ಕೃಷ್ಣಕುಮಾರ್ ಭೇಟಿ ನೀಡಿ ಪ್ರತಿಭಟನಾ ನಿರತರನ್ನು ಸಂತೈಸಿದರು. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಮಾತು ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು. ಒಂದು ವಾರದ ಒಳಗಾಗಿ ಅಧಿಕಾರಿಗಳು ನಿವೇಶನ ಕಲ್ಪಿಸಲು ಮುಂದೆ ಬಾರದೇ ಇದ್ದಲ್ಲಿ, ಧರಣಿಯನ್ನು ಪುನಃ ಆರಂಭಿಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.