ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕಾಡಿನ ಮದ್ಯೆ ಸುಟ್ಟ ಕಾರು ಮತ್ತು ಅಸ್ತಿ ಪಂಜರ ಸಿಕ್ಕ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು ಪ್ರಕರಣದ ಸಂಬಂಧ ಮನೆಯಲ್ಲಿದ್ದ ಹಂತಕರನ್ನು ಬಂಧಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕು ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 28ರಂದು ಸುಟ್ಟು ಕರಕಲಾಗಿದ್ದ ಕಾರು ಮತ್ತು ಅಸ್ತಿಪಂಜರ ಪತ್ತೆಯಾಗಿತ್ತು ಆದರೆ ಕೊಲೆಯೋ? ಆತ್ಮಹತ್ಯೆಯೋ? ಎಂದು ತಿಳಿಯದಿದ್ದರಿಂದ ತನಿಖೆಯನ್ನು ಚುರುಕುಗೊಳಿಸಿದ ಪೂಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆ ಕಾರಿನಲ್ಲಿದ್ದ ಮೃತ ವ್ಯಕ್ತಿ ಸಾಗರ ತಾಲ್ಲೂಕಿನ ಆಚಾಪುರ ಗ್ರಾಮದ ಮುಸ್ಲಿಂಪೇಟೆಯ ನಿವಾಸಿ ವಿನೋದ್(45) ಎಂದು ತಿಳಿದುಬಂದಿದೆ. ವಿನೋದ್ ರವರನ್ನು ಸೆಪ್ಟೆಂಬರ್ 26 ರಂದು ರಾತ್ರಿ 8.30 ರ ಹೊತ್ತಿಗೆ ತಂತಿಯನ್ನು ಬಿಗಿಯುವ ರಾಡ್, ಸುತ್ತಿಗೆ, ಕಬ್ಬಿಣದ ಪೈಪ್ ರಾಡ್ ನಿಂದ ಹೊಡೆದು ಕೊಲೆ ಮಾಡಿ ಅವರ ಕಾರಿನಲ್ಲಿಯೇ ಮೃತದೇಹವನ್ನು ಕಾಡಿಗೆ ಸಾಗಿಸಿ ಕಾರಿಗೆ ಪೆಟ್ರೋಲ್ ನನ್ನು ಸುರಿದು ಬೆಂಕಿಯನ್ನು ಹಚ್ಚಿದ್ದರು.

ಪೊಲೀಸರು ವಿಚಾರಣೆ ನಡೆಸಲು ಮನೆಗೆ ಬಂದಾಗ ಅನುಮಾನ ಬರಬಾರದೆಂದು ಕೊಲೆಮಾಡಿದ ಜಾಗವನ್ನು ಸ್ವಚ್ಛಗೊಳಿಸಿದ್ದರು ಹಾಗೂ ಕೃತ್ಯ ನಡೆಸುವ ವೇಳೆ ಆರೋಪಿಗಳು ಬಳಸಿದ್ದ ಬಟ್ಟೆಗಳನ್ನು ಮನೆಯ ಹಿಂಬದಿಯಲ್ಲಿಯೇ ಸುಟ್ಟು ಹಾಕಿರುವುದನ್ನು ಗಮನಿಸಿದ ಪೊಲೀಸರು ತನಿಖೆಯ ವೇಳೆ ಮನೆಯವರ ಮೇಲೆಯೇ ಅನುಮಾನ ವ್ಯಕ್ತವಾದ ಕಾರಣ ವಿಚಾರಣೆಯನ್ನು ತೀವ್ರಗೊಳಿಸಿ ವಿನೋದ್ ಕೊಲೆಯ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದರು.

ಕೊಲೆ ಪ್ರಕರಣದ ಸಂಬಂಧ ಪೊಲೀಸರು ವಿನೋದ್ ನ ಹೆಂಡತಿ, ಇಬ್ಬರು ಗಂಡು ಮಕ್ಕಳು, ಹೆಂಡತಿಯ ಅಕ್ಕನ ಮಗ, ಮತ್ತು ವಿನೋದ್ ರವರ ತಮ್ಮನನ್ನು ಬಂಧಿಸಿದ್ದಾರೆ.