ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಾದ್ಯಂತ ಇಂದು ಸಡಗರ, ಸಂಭ್ರಮದೊಂದಿಗೆ ಶಾಸ್ತ್ರೋಕ್ತವಾಗಿ ಆಯುಧ ಪೂಜೆ ನಡೆಯಿತು. 

ಶೃಂಗೇರಿಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಠಾಣೆಯನ್ನು ಸಿಂಗರಿಸಿ, ಆಯುಧಗಳನ್ನು ಪೂಜೆಗೆ ಇಟ್ಟು ಶಾಸ್ತ್ರೋಕ್ತವಾಗಿ ಪೂಜೆಯನ್ನು ನೆರವೇರಿಸಿದರು ಮತ್ತು ಶೃಂಗೇರಿ ಶಾರದಾಂಬೆಯ ಸನ್ನಿಧಿಗೆ ತೆರಳಿ ತಾಯಿ ಶಾರದೆಯ ದರ್ಶನ ಪಡೆದು ಆಯುಧಪೂಜೆಯನ್ನು ಆಚರಿಸಿದರು.

ಶೃಂಗೇರಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹ ಇಂದು ವಿಶೇಷವಾಗಿ ಆಯುಧ ಪೂಜೆಯನ್ನು ಆಚರಣೆ ಮಾಡಿದರು. ಅಗ್ನಿಶಾಮಕ ಠಾಣೆಯನ್ನು  ಸ್ವಚ್ಛಗೊಳಿಸಿ, ಅಚ್ಚುಕಟ್ಟಾಗಿ ಸಿಂಗರಿಸಿ, ಅಗ್ನಿ ಶಮನ ಮಾಡುವ ಅಗ್ನಿಶಾಮಕ ಠಾಣೆಯ ವಾಹನವನ್ನು ಆಯುಧ ಪೂಜೆಯನ್ನು ನೆರವೇರಿಸಿದರು. ಅಗ್ನಿಶಾಮಕ ಠಾಣೆಯನ್ನು ಎಲ್ಲಾ ಸಿಬ್ಬಂದಿಗಳು ಈ ಸಮಯದಲ್ಲಿ ಹಾಜರಿದ್ದರು.

ಶೃಂಗೇರಿಯ ಮೆಸ್ಕಾಂ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಕೂಡ ವಿಜೃಂಭಣೆಯಿಂದ ಆಯುಧ ಪೂಜೆಯನ್ನು ಆಚರಿಸಿದರು. ತಳಿರು ತೋರಣಗಳಿಂದ, ವಿದ್ಯುತ್ ದೀಪದ ಅಲಂಕಾರ ಗಳಿಂದ ಮೆಸ್ಕಾಂ ಅನ್ನು ಕಂಗೊಳಿಸುವಂತೆ ಮಾಡಿದ ಸಿಬ್ಬಂದಿಗಳು ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡಿದರು. ಸಿಹಿ ವಿತರಿಸಿದರು.

ಶೃಂಗೇರಿ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಕೂಡ ವಾಹನಗಳಿಗೆ, ಅವರವರ ಕಾರ್ಯಕ್ಷೇತ್ರಗಳಲ್ಲಿ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಕೂಡ ಪೂಜಿಸಿ ಜನರು ಭಕ್ತಿ ಭಾವದಿಂದ ಆಯುಧ ಪೂಜೆಯ ಆಚರಣೆ ಮಾಡಿದರು. ಚಿಕ್ಕಮಗಳೂರು ಜಿಲ್ಲೆಯ ಬಾಳೂರು, ಕೊಪ್ಪ, ಜಯಪುರ ಸೇರಿದಂತೆ ಹಲವಾರು ಠಾಣೆಗಳಲ್ಲಿ ಪೊಲೀಸರು ಆಯುಧ ಪೂಜೆ ಸಲ್ಲಿಸಿದರು.