ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಕ್ಷೇತ್ರ ಕಛೇರಿ ಉದ್ಘಾಟನೆ ಸಮಾರಂಭ ಹಾಗೂ ಸಂಘಟನಾ ಪರ್ವ ಕಾರ್ಯಕ್ರಮ ನಡೆಯಿತು.

ಕೊಪ್ಪದ ಬಾಳಗಡಿ ರಸ್ತೆಯಲ್ಲಿರುವ ಜಾತ್ಯಾತೀತ ಜನತಾದಳ ಪಕ್ಷದ ಕ್ಷೇತ್ರ ಕಛೇರಿಯನ್ನು ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವರಾದ ಸಾ.ರಾ ಮಹೇಶ್ ರವರು ಉದ್ಘಾಟಿಸಿದರು. 

ಕೊಪ್ಪದ ಟೌನ್ ಹಾಲ್ ನಲ್ಲಿ ಆಯೋಜನೆಗೊಂಡಿದ್ದ ಸಂಘಟನಾ ಪರ್ವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೋಜೆಗೌಡ, ಶಾಸಕ ಸಾ.ರಾ ಮಹೇಶ್, ಹೆಚ್. ಡಿ ವೆಂಕಟೇಶ್, ಬಿಬಿ ನಿಂಗಯ್ಯ ಹಾಗೂ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಸುಧಾಕರ್ ಎಸ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕ್ಷೇತ್ರಾಧ್ಯಕ್ಷರಾದ ಶ್ರೀ ಬಿ.ಹೆಚ್ ದಿವಾಕರ್ ಭಟ್ ಅವರು ವಹಿಸಿಕೊಂಡಿದ್ದರು. 

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಈ ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಾ.ರಾ ಮಹೇಶ್ ಮಲೆನಾಡು ಭಾಗವು ಹಿಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿತ್ತು, ದಿವಂಗತ ಗೋವಿಂದೇಗೌಡರ ಅವಧಿಯಲ್ಲಿ ಅತಿ ಅಭಿವೃದ್ಧಿ ಹೊಂದಿದ ಪ್ರದೇಶ ಎಂದು ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳನ್ನು ಗುರುತಿಸಲಾಗಿತ್ತು ಎಂದರು. ಪಕ್ಷ ಸಂಘಟನೆಯನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಕುರಿತಾಗಿ ಇಂದು ಸಂಘಟನಾ ಪರ್ವ ಕಾರ್ಯಕ್ರಮದ ಆ ಯೋಜನೆಯಾಗಿದೆ ಎಂದರು. ಪ್ರಸ್ತುತ ಮಲೆನಾಡಿನ ಜನರ ಸಮಸ್ಯೆಗೆ ಧ್ವನಿಯಾಗಿ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಸುಧಾಕರ್ ಎಸ್ ಶೆಟ್ಟಿ ಅವರನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಮುಂದಿನ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷದ ಹಿರಿಯರು ತೀರ್ಮಾನಿಸಿ ಘೋಷಣೆ ಮಾಡಿದ್ದಾರೆ, ಸುಧಾಕರ್ ಶೆಟ್ಟಿಯವರೊಂದಿಗೆ ಸದಾಕಾಲ ನಾನು ಸೇರಿದಂತೆ ಪಕ್ಷದ ಹಿರಿಯರು ಇದ್ದೇವೆ, ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಈಗಿನಿಂದಲೇ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಕರೆನೀಡಿದರು.

ನಂತರ ಮಾತನಾಡಿದ ಜಾತ್ಯಾತೀತ ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿಯವರು ಈ ಭಾಗದ ಮನೆ-ಮನಗಳಲ್ಲಿ ಜೆಡಿಎಸ್ ಪಕ್ಷವು ರಾರಾಜಿಸುತ್ತಿದೆ, ಪಕ್ಷದ ಹಿರಿಯರನ್ನು ಕಿರಿಯರನ್ನು ಸಂಘಟಿಸಿ ಪುನಃ ಪಕ್ಷಕ್ಕೆ ಕರೆತರುವ ಕೆಲಸವು ಕೂಡ ಈಗಾಗಲೇ ಆರಂಭಗೊಂಡಿದೆ, ಮುಂದಿನ 2023ರ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಬಹುಮತದೊಂದಿಗೆ ಆಯ್ಕೆ ಮಾಡಿ ರಾಜ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ರಚನೆ ಗೊಳಿಸುವಲ್ಲಿ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದರು. ಈ ಭಾಗದ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಲು ಯಾರೂ ಕೂಡ ಈವರೆಗೆ ಮುಂದೆ ಬಂದಿಲ್ಲ ಈ ಕುರಿತಾಗಿ ನಾವು ಮಾತನಾಡಬೇಕಿದೆ, ಈ ಭಾಗದ ಜನರಿಗೆ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳು ತಲುಪುತ್ತಿಲ್ಲ, ಅದರ ಅರಿವನ್ನು ಸಹ ಜನಪ್ರತಿನಿಧಿಗಳು ತಲುಪಿಸುತ್ತಿಲ್ಲ ಇದು ವಿಷಾದನೀಯ ಎಂದರು. ಯುವಕರಿಗೆ ಕಿವಿಮಾತನ್ನು ನೀಡಿದ ಸುಧಾಕರ ಶೆಟ್ಟಿ ಅವರು ಮೊದಲು ಯುವಜನತೆ ಆದಾಯ ತರುವಲ್ಲಿ ಪ್ರಮುಖ ಪ್ರಾಶಸ್ತ್ಯ ನೀಡಬೇಕು ನಂತರದಲ್ಲಿ ಪಕ್ಷಗಳ ಕೆಲಸವನ್ನು ಮಾಡಿ, ತಂದೆತಾಯಿಗಳ ಕನಸನ್ನು ಈಡೇರಿಸುವ ಮಹತ್ತರ ಜವಾಬ್ದಾರಿ ಯುವಜನತೆಯ ಮೇಲಿದೆ ಆದಕಾರಣ ಮೊದಲು ಉದ್ಯೋಗ ಹಾಗೂ ಆದಾಯಕ್ಕೆ ಮೂಲ ಪ್ರಾಶಸ್ತ್ಯ ನೀಡಿ ನಂತರದಲ್ಲಿ ನಿಮ್ಮ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದರು. ಪರಸ್ಪರ ತೇಜೋವಧೆ ಮಾಡದೆ ಕೇವಲ ರಾಜ್ಯದ, ಕ್ಷೇತ್ರದ ಅಭಿವೃದ್ಧಿಯ ಕುರಿತಾಗಿ ಮಾತನಾಡೋಣ ಎಂದು ಉಳಿದ  ನಾಯಕರಿಗೆ ಕರೆ ನೀಡಿದರು. 

ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀಯುತ ಭೋಜೇಗೌಡ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಜೆಡಿಎಸ್ ಮುಖಂಡರಾದ ಶ್ರೀ ಎಚ್ ಡಿ ರಾಜೇಂದ್ರ, ಜೆಡಿಎಸ್ ಮುಖಂಡರಾದ ಶ್ರೀ ಹೆಚ್ ಜಿ ವೆಂಕಟೇಶ್, ಶರತ್ ಡಿ ಕಲ್ಯ, ಕೊಪ್ಪ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಎ. ಎನ್ ರಾಮಸ್ವಾಮಿ, ನರಸಿಂಹರಾಜಪುರ ತಾಲೂಕಿನ ಜೆಡಿಎಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್, ಜೆಡಿಎಸ್ ಶೃಂಗೇರಿ ತಾಲೂಕಿನ ಅಧ್ಯಕ್ಷರಾದ ಕಳಸಪ್ಪ, ಅಲ್ಪಸಂಖ್ಯಾತ ಮುಖಂಡರಾದ ಮಹಮ್ಮದ್ ಬದ್ರಿಯಾ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬಿ.ಹೆಚ್ ದಿವಾಕರ್ ಭಟ್, ಶೃಂಗೇರಿ ಕ್ಷೇತ್ರದ ಜೆಡಿಎಸ್ ಮುಖಂಡರಾದ ಡಾ. ಅಣ್ಣಾದೊರೆ ಕೆ.ಸಿ, ಹಾಗೂ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.