ಹಾಸನ : (ನ್ಯೂಸ್ ಮಲ್ನಾಡ್ ವರದಿ) ಕೊಟ್ಟ ಸಾಲವನ್ನು ವಾಪಸ್ಸು ಕೇಳಿದ ಕಾರಣಕ್ಕೆ ಯುವಕನೋರ್ವ ವೃದ್ಧನನ್ನು ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.  

ಸಾಲದ ಹಣ ವಾಪಸ್ಸು ಕೇಳಿದಕ್ಕೆ ಹಾಸನ ತಾಲೂಕಿನ ಸಮುದ್ರವಳ್ಳಿ ಗ್ರಾಮದ 60 ವರ್ಷದ ದಾಸೇಗೌಡ ಎಂಬುವರನ್ನು ಆರೋಪಿ ಯುವಕ ಕಿರಣ್​ ಗೌಡ ಕೊಲೆ ಮಾಡಿ ಎಸ್ಕೇಪ್ ಆಗಿದ್ದ,ದಾಸೇಗೌಡನ ಜಮೀನಿನ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನು ಹಾಸನ ಪೊಲೀಸರು ಕೈಗೆತ್ತಿ ಕೊಂಡಿದ್ದರು. ಪ್ರಸ್ತುತ ವೃದ್ಧನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪಾಪಿ ಯುವಕನನ್ನು ಬಂಧಿಸುವಲ್ಲಿ ಹಾಸನ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆ ಆರೋಪಿ ಕಿರಣ್​ಗೆ ಕೊಲೆಯಾದ ದಾಸೇಗೌಡ ಅವರು 5 ಲಕ್ಷ ಸಾಲ ನೀಡಿದ್ದರು. ಈ ಸಾಲದ ಹಣವನ್ನು ದಾಸೇಗೌಡ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಕಿರಣ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್​ ಗೌಡ ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿಯು ಪೊಲೀಸರ ವಶದಲ್ಲಿದ್ದಾನೆ. ತನಿಖೆಯನ್ನು ಪೂರ್ಣ ಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.