ಹಾಸನ : (ನ್ಯೂಸ್ ಮಲ್ನಾಡ್ ವರದಿ) ಕೊರೋನಾ ಕಾರಣದಿಂದಾಗಿ ಎರಡು ವರ್ಷ ತೆರೆಯದೇ ಇದ್ದ ಹಾಸನಾಂಬ ದೇವಿಯ ದೇವಸ್ಥಾನ ಇಂದು ತೆರಯಲಿದ್ದು ಈ ಬಾರಿ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ.
ಎರಡು ವರ್ಷಗಳಿಂದ ಕೊರೋನ ಕಾರಣದಿಂದಾಗಿ ಬಾಗಿಲು ತೆರೆಯದೆ ಇದ್ದ ಹಾಸನದ ಅಧಿದೇವತೆ ಹಾಸನಾಂಬೆ ದೇಗುಲವು, ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ತೆರೆಯಲಿದೆ. ಗರ್ಭಗುಡಿಯಲ್ಲಿ ರಾರಾಜಿಸುತ್ತಿರುವ ತಾಯಿ ಹಾಸನಾಂಬೆದರ್ಶನಕ್ಕಾಗಿ ಭಕ್ತ ಸಮೂಹ ನಾ ಮುಂದೆ ತಾ ಮುಂದೆ ಎಂಬ ನಿಟ್ಟಿನಲ್ಲಿ ಸಿದ್ಧರಾಗಿದ್ದಾರೆ. ಇಂದು ದೇವಸ್ಥಾನದ ಬಾಗಿಲು ತೆಗೆದ ನಂತರ ದೇವಾಲಯವನ್ನು ಶುದ್ಧ ಮಾಡಿ ಕೇವಲ ದೇವಸ್ಥಾನ ಮಂಡಳಿ ಹಾಗೂ ಪ್ರಮುಖರಿಗೆ ಮಾತ್ರ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ನಾಳೆ ಬೆಳಗ್ಗೆ 06 ಗಂಟೆಯಿಂದ ಸರ್ವರಿಗೂ ದರ್ಶನ ನೀಡುತ್ತಾಳೆ ತಾಯಿ ಹಾಸನಾಂಬೆ.
ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ :
ಕೊರೋನಾ ಕಾರಣದಿಂದಾಗಿ ಈ ಬಾರಿ ದೇವಾಲಯಕ್ಕೆ ಆಗಮಿಸುವವರು ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ಈ ಕುರಿತಾಗಿ ಹಾಸನಾಂಬ ದೇವಾಲಯದ ಹೊರ ಭಾಗದಲ್ಲಿ ನಿರ್ಮಿಸಿರುವ 13 ಕೌಂಟರ್ ಗಳಲ್ಲಿ ಲಸಿಕೆ ಪಡೆದುಕೊಂಡಿರುವ ಕುರಿತಾದ ಪರಿಶೀಲನೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು ವರ್ಷಗಳ ನಂತರದಲ್ಲಿ ದೇವಾಲಯದ ಗರ್ಭಗುಡಿಯನ್ನು ತೆಗೆಯುತ್ತಿರುವುದು ಭಕ್ತ ಸಮೂಹದಲ್ಲಿ ಇನ್ನಷ್ಟು ಸಂತಸ ತಂದಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ದೇವಸ್ಥಾನ ಮಂಡಳಿಯವರು ತಿಳಿಸಿದ್ದಾರೆ.

0 Comments