ಚಿಕ್ಕಮಗಳೂರು : ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೊಕ್ಕಳಿಯಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಬಿ ಹೊಸಳ್ಳಿ , ಭಾರತಿ ಬೈಲ್, ಹೊಕ್ಕಳ್ಳಿ, ಬಾನಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿತ್ತು, ಕ್ಯಾಮೆರಾ ಕಣ್ಣಿಗೆ ಬೀಳದೆ ಮರೆಯಾಗಿತ್ತು. ಈಗ ಹುಲಿಯು ಹೊಕ್ಕಳ್ಳಿ ಗ್ರಾಮದಲ್ಲಿ ಹಸುವನ್ನು ಕೊಂದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.
ಬಿ ಹೊಸಳ್ಳಿ ಭಾಗದಲ್ಲಿ ಹುಲಿಯ ಬೇಟೆಗಾಗಿ ತಿಂಗಳ ಹಿಂದೆಯೇ ನಾಲ್ಕು ಸಿಸಿ ಕ್ಯಾಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಅಳವಡಿಸಿದ್ದರು, ಹುಲಿ ಮಾತ್ರ ಸ್ಥಳ ಬದಲಾಯಿಸಿ ಕುಂದೂರು, ಕುಂಡ್ರಾ, ಭಾಗಗಳ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದರಿಂದ ಈವರೆಗೂ ಬಿ. ಹೊಸಳ್ಳಿ ಭಾಗದಲ್ಲಿ ಹುಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿರಲಿಲ್ಲ. ಇದರಿಂದ ಜನರು ನಿರ್ಭೀತಿಯಿಂದ ಇದ್ದರು. ಆದರೆ ಈಗ ಪುನಃ ಬುಧವಾರದಂದು ಬಿ.ಹೊಸಳ್ಳಿ ಸಮೀಪದ ಹೊಕ್ಕಳ್ಳಿಯ ಪ್ರಶಾಂತ್ ಅವರ ಹಸುವನ್ನು ಹುಲಿಯು ಕೊಂದುಹಾಕಿದ್ದು, ಸುತ್ತಮುತ್ತಲ ಜನರು ಮತ್ತೆ ಆತಂಕಪಡುವಂತಾಗಿದೆ. ಕೂಲಿಕಾರ್ಮಿಕರು, ಶಾಲಾಮಕ್ಕಳು ಹೊರಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಶೀಘ್ರವೇ ಹುಲಿಯನ್ನು ಹಿಡಿದು ಸ್ಥಳಾಂತರಿಸಬೇಕೆಂದು ಬಿ ಹೊಸಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅರಣ್ಯ ವಲಯ ಅಧಿಕಾರಿ ಉಮೇಶ್, ಮತ್ತು ಅರಣ್ಯ ರಕ್ಷಕ ಮೊಹಸಿನ್ ಸ್ಥಳಕ್ಕೆ ಧಾವಿಸಿದ್ದಾರೆ.
ಈ ಬಗ್ಗೆ ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿರುವ ಮೂಡಿಗೆರೆ ವಲಯಅರಣ್ಯಾಧಿಕಾರಿ ಮೋಹನ್ ಬಿ ಹೊಸಳ್ಳಿ ಗ್ರಾಮದಲ್ಲಿ 4 ಕ್ಯಾಮೆರಾ ಅಳವಡಿಸಿದ್ದು ಹುಲಿ ಸಂಚಾರ ಮಾತ್ರ ಕ್ಯಾಮರಾಕ್ಕೆ ಸರಿಯಾಗಿಲ್ಲ. ಈಗ ಹೊಕ್ಕಳ್ಳಿಯಲ್ಲಿ ಪ್ರಶಾಂತ್ ಅವರ ಹಸುವೊಂದನ್ನು ಹುಲಿಯು ಕೊಂದು ಹಾಕಿದೆ. ಆದ್ದರಿಂದ ಹುಲಿಯ ಸೆರೆಗೆ ಹೊಕ್ಕಳ್ಳಿಯಲ್ಲಿಯೂ ಒಂದು ಕ್ಯಾಮರಾ ಅಳವಡಿಸಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹುಲಿಯ ಚಲನ ವಲನ ಕಂಡುಬಂದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಹುಲಿಯನ್ನು ಹಿಡಿಯುವ ವ್ಯವಸ್ಥೆ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments