ಚಿಕ್ಕಮಗಳೂರು : ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಎಂದು ಆರೋಪಿಸಿ ಹಾಗೂ ಅದನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದರು.
ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವುದು ಸರಕಾರಿ ಪ್ರೇರಿತ ದಾಳಿ ಎಂದು ಆರೋಪಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಚಿಕ್ಕಮಗಳೂರು ನಗರದ ಆಝಾದ್ ಪಾರ್ಕ್ ಮುಂಭಾಗದಲ್ಲಿ ಪ್ರತಿಭಟಿಸಿದರು.
ಪಾಪ್ಯುಲರ್ ಫ್ರಂಟ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಚಾಂದ್ ಪಾಷ ರವರು ಮಾತನಾಡಿ ಬಾಂಗ್ಲಾ ದೇಶದ ಘಟನೆಯನ್ನು ನೆಪವಾಗಿಟ್ಟುಕೊಂಡು, ತ್ರಿಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರ ವಿರುದ್ಧ ವಾಗಿ ಸಂಘಪರಿವಾರದ ಹಿಂಸಾತ್ಮಕ ಕೃತ್ಯಗಳು ಮರುಕಳಿಸುತ್ತಿದ್ದು, ರಾಜ್ಯದಲ್ಲಿಯೂ ತ್ರಿಶೂಲ ಧೀಕ್ಷೆ ನೀಡುವ ಮುಖಾಂತರ ಹಿಂಸಾಚಾರಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿಯೂ ಅಂತಹ ಘಟನೆಗಳು ಮುಂದುವರಿದರೆ ಸಂವಿಧಾನವು ನಮ್ಮ ಆತ್ಮ ರಕ್ಷಣೆಗಾಗಿ ನೀಡಿದ ಪ್ರತಿರೋಧದ ಮೂಲಕ ಸಂಘಪರಿವಾರವನ್ನು ಹಿಮ್ಮೆಟ್ಟಿಸುವೆವು ಎಂದು ಹೇಳಿದರು.
ಪಿಎಫ್ಐ ಚಿಕ್ಕಮಗಳೂರು ನಗರ ಘಟಕ ಕಾರ್ಯದರ್ಶಿ ಮುಬಾರಕ್ ಮಾತನಾಡಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಹಿಂಸೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡಿಸುತ್ತದೆ, ಆದರೆ ಅಲ್ಲಿಯ ಹಿಂಸಾಚಾರದ ನೆಪದಲ್ಲಿ ನಮ್ಮ ದೇಶದಲ್ಲಿ ಮುಸಲ್ಮಾನರನ್ನು ಗುರಿಯಾಗಿಸಿದರೆ ನಾವು ಪ್ರತಿರೋಧವನ್ನು ಒಡ್ಡಲು ತಯಾರಾಗಿದ್ದೇವೆ ಎಂದು ಹೇಳಿದರು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಅಧ್ಯಕ್ಷರಾದ ಮೌಲಾನ ಯೂನುಸ್ ಮತ್ತು ಜಾಮಿಯಾ ಮಸೀದಿ ಅಧ್ಯಕ್ಷರಾದ ಸಿ.ಎನ್ ಅಕ್ಮಲ್ ರವರು ಮಾತನಾಡಿ ತ್ರಿಪುರ ಘಟನೆಯನ್ನು ಖಂಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಪಿಎಫ್ಐ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಝಮೀರ್ ಬಾಷ, ಜಿಲ್ಲಾ ಸಮಿತಿ ಸದಸ್ಯರಾದ ಅಝೀಝ್ ಬಣಕಲ್, ಅಝ್ಮತ್ ಪಾಷ ಹಾಗೂ ರಫೀಕ್, ಅಮ್ಜದ್, ಕೆಎಮ್ಡಿಎಸ್ ರಾಜ್ಯ ಉಪಾಧ್ಯಕ್ಷ ಶಿಹಾನ್ ಪಾಷ ಸಹಿತ ಹಲವಾರು ಗಣ್ಯರು, ಪಿಎಫ್ಐ ಕಾರ್ಯಕರ್ತರು ಉಪಸ್ಥಿತರಿದ್ದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments