ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನ ಪ್ರತಿಭಾವಂತ ಬಾಲಕಿ ಎಸ್.ಅರ್ವಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ  ಪ್ರಶಸ್ತಿ ದೊರೆತಿದೆ. ಬಾಲ್ಯದಲ್ಲೇ  ತನ್ನ ಸಾಮರ್ಥ್ಯ ಅನಾವರಣ ಮಾಡಿದ ಮೂರು ವರ್ಷದ  ಬಾಲಕಿ ಆರ್ವಿ, ವಿವಿಧ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಬಹಳ ಚುರುಕಾಗಿ ಉತ್ತರಿಸಿ ಎಲ್ಲರನ್ನು ಅಚ್ಚರಿ ಗೊಳಿಸಿದ್ದಾಳೆ. ಜೊತೆಗೆ ಪ್ರಶಸ್ತಿಯನ್ನೂ ಗೆದ್ದಿದ್ದಾಳೆ. ಪ್ರಶಸ್ತಿಯ ಜೊತೆಗೆ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. 

ಕೆ ಎಸ್ ಶಾಶ್ವತ್ ಹಾಗೂ ಸ್ಮಿತಾ ಅವರ ಪುತ್ರಿಯಾದ ಎಸ್ ಆರ್ವಿ, ಆನ್ ಲೈನ್ ಮೂಲಕ ನಡೆದ ಸ್ಪರ್ಧೆಯಲ್ಲಿ 12 ಬಣ್ಣಗಳು, 9 ಆಕಾರಗಳು, 13 ಹಣ್ಣುಗಳು,  19 ವಿವಿಧ ವಾಹನಗಳು, 15 ತರಕಾರಿಗಳು, 37 ಪ್ರಾಣಿಗಳು, ಕನ್ನಡ ಮತ್ತು ಹಿಂದಿ ಅಂಕೆಗಳು, ಇಂಗ್ಲೀಷ್ ಸಂಖ್ಯೆಗಳು ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆಗಳು, ಏಳು ಇಂಗ್ಲಿಷ್ ಪದ್ಯಗಳು, ದ್ವಿಭಾಷೆಯಲ್ಲಿ ದಿನಗಳು ಮತ್ತು ತಿಂಗಳುಗಳ ಹೆಸರು  ನಿರರ್ಗಳವಾಗಿ  ಹೇಳುವ ಮೂಲಕ ಹಾಗೂ 7 ಪ್ರಾಣಿಗಳ ಅನುಕರಣೆ ಮಾಡುವ ಮೂಲಕ ಪ್ರತಿಭೆ ಬೆಳಗಿಸಿ ವಿಜೇತರಾಗಿ ಬಾಲ್ಯದಲ್ಲೇ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಮಗಳು ವರ್ಷ ತುಂಬಿದಾಗಲೇ  ಚೂಟಿಯಾಗಿದ್ದಳು,  ಏನೇ ಹೇಳಿದರೂ ಹೇಳಿದನ್ನು ನೆನಪಿರುವ ಗುಣ ಹೊಂದಿದ್ದರಿಂದ, ಅವಳಿಗೆ ಅಭ್ಯಾಸ ನೀಡಿದ್ದೆ.  ಇದು ಅವಳಿಗೆ ಪ್ರಶಸ್ತಿ ದೊರೆಯಲು ಕಾರಣವಾಯಿತು ಎಂದು ತಾಯಿ ಸ್ಮಿತಾ  ಮಗಳ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಇವಳ ಹೆಸರು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಪೋಷಕರು ಕೂಡ ಈ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.