ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ)
ಅಭಿವೃದ್ಧಿಗೆ ಚಕ್ಕರ್, ಶುಲ್ಕ ವಸೂಲಾತಿಗೆ ಹಾಜರ್ ಎಂಬ ನಿಲುವು ಚಿಕ್ಕಮಗಳೂರು ನಗರಸಭೆ ಹೊಂದಿದೆ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ. ಚಿಕ್ಕಮಗಳೂರಿನ ಪ್ರಮುಖ ರಸ್ತೆಯಾದ ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ನಗರಸಭೆ ಶುಲ್ಕ ವಸೂಲಿಗೆ ಮುಂದಾಗಿದೆ. ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ನವೆಂಬರ್ ಒಂದನೇ ತಾರೀಖಿನಿಂದ ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಬೇಕಾದರೆ ಶುಲ್ಕ ಪಾವತಿ ಮಾಡಬೇಕು ಎಂಬ ಹೊಸ ಕ್ರಮವನ್ನು ಜಾರಿಗೊಳಿಸಲು ನಗರಸಭೆ ಮುಂದಾಗಿದೆ. ಈ ವಸೂಲಾತಿಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ನಂತರದ ಸಮಯದಲ್ಲಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟುಗಳು ತೀವ್ರವಾಗಿ ಕುಂಠಿತಗೊಂಡಿದ್ದು, ಈ ಸಂದರ್ಭದಲ್ಲಿಯೂ ಕೂಡ ಎಂ.ಜಿ ರಸ್ತೆಯ ವ್ಯಾಪಾರಿಗಳು, ನಿವಾಸಿಗಳು ನಗರಸಭೆಗೆ ಸರಿಯಾದ ಕಂದಾಯ ಪಾವತಿಯನ್ನು ಮಾಡುತ್ತಲೇ ಬಂದಿದ್ದಾರೆ, ಆದರೂ ಗಾಯದ ಮೇಲೆ ಬರೆ ಎಳೆದಂತೆ ಈ ರೀತಿಯಾದ ಪಾರ್ಕಿಂಗ್ ಸುಂಕ ವಸೂಲಾತಿ ಸರಿಯಲ್ಲ ಇದೊಂದು ಅವೈಜ್ಞಾನಿಕ ಕ್ರಮ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಸರಿಯಾದ ನಿರ್ವಹಣೆ ಇಲ್ಲದ ಹದಗೆಟ್ಟಿರುವ ವಾರ್ಡ್ ಗಳ ರಸ್ತೆ, ವಿದ್ಯುತ್ ಕಂಬಗಳಲ್ಲಿ ಸರಿಯಾಗಿ ಕಂಡುಬಾರದಿರುವ ಬೆಳಕು ಈ ರೀತಿಯ ಇನ್ನಷ್ಟು ಅನೇಕ ಸಮಸ್ಯೆಗಳನ್ನು ಎಂ.ಜಿ ರಸ್ತೆಯ ವರ್ತಕರು ಹಾಗೂ ನಿವಾಸಿಗಳು ಎದುರಿಸುತ್ತಿದ್ದಾರೆ ಈ ಕುರಿತು ನಗರಸಭೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ. ವಾಹನ ನಿಲುಗಡೆಯ ಸ್ಥಳದಲ್ಲಿ ಸುಂಕ ವಸೂಲಾತಿ ಮಾಡುವುದು ಸಮಂಜಸವಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈ ಕೂಡಲೇ ಸುಂಕದ ವ್ಯವಸ್ಥೆಯ ಕುರಿತಾಗಿರುವ ಆಲೋಚನೆಯನ್ನು ಕೈ ಬಿಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು, ಸ್ಥಳೀಯ ಶಾಸಕರಾದ ಸಿ.ಟಿ ರವಿ ಅವರು ಮುಂದೆ ಬಂದು ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

0 Comments