ಚಿಕ್ಕಮಗಳೂರು: ದತ್ತ ಪೀಠ ಹಿಂದೂಗಳದ್ದೇ ಹೊರತು ಮುಸಲ್ಮಾನರದ್ದಲ್ಲ, ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ದತ್ತಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ವಿ. ಸುನಿಲ್ ಕುಮಾರ್ ಅವರು ಇನಾಂ ದತ್ತಾತ್ರೇಯ ಪೀಠವೇ ಬೇರೆ ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್ ದರ್ಗವೇ ಬೇರೆ,ಈ ಕುರಿತಾದ ವಿಚಾರಗಳು ದಾಖಲೆಗಳಲ್ಲಿ ಸಾಬೀತಾಗಿದೆ ಎಂದರು. ದತ್ತಪೀಠದ ಪೂಜೆ ಹಿಂದೂಗಳ ಮೂಲಕವೇ ನಡೆಯಬೇಕು ಎಂದು ಕೋರ್ಟ್ ಈಗಾಗಲೇ ಆದೇಶವನ್ನು ಹೊರಡಿಸಿದೆ, ಮುಸಲ್ಮಾನರು ಕಣ್ತೆರೆದು ನಿಮ್ಮ ನಾಗೇನಹಳ್ಳಿಯ ದರ್ಗಾವನ್ನು ಅಭಿವೃದ್ಧಿಮಾಡಿಕೊಳ್ಳಿ ಎಂದು ಹೇಳಿದರು.
ಈ ಹಿಂದೆ ಸುಪ್ರೀಂ ಕೋರ್ಟ್ ಹಿಂದೂಗಳಿಗೆ ಪೂಜೆಯನ್ನು ಸಲ್ಲಿಸಲು ಅವಕಾಶವನ್ನು ನೀಡಿದ್ದರೂ ಸಹ ಆ ಅವಕಾಶವನ್ನು ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರ ಹಿಂದುಗಳಿಗೆ ನೀಡದೇ ಹೊಸ ಸಮಿತಿಯನ್ನು ರಚಿಸಿ ಮುಜಾವರ್ ಅನ್ನು ನೇಮಕಗೊಳಿಸಿ ಅವರಿಂದ ಪೂಜೆಯನ್ನು ನಡೆಸಲು ಅವಕಾಶವನ್ನು ನೀಡಿತ್ತು. ಆದರೆ ಈಗ ನ್ಯಾಯಾಲಯ ಹಿಂದಿನ ಸರ್ಕಾರದ ಮುಜಾವರ್ ನೇಮಕವನ್ನು ರದ್ದು ಮಾಡಿ ಹಿಂದೂಗಳ ಪರವಾದ ತೀರ್ಪನ್ನು ನೀಡಿದೆ ಇದು ಸ್ವಾಗತಾರ್ಹ ಎಂದರು.
ದತ್ತಪೀಠದ ಹೋರಾಟದ ಮೂಲಕವೇ ನಾನು ಸಮಾಜದಲ್ಲಿ ಗುರುತಿಸಿಕೊಂಡಿರುವುದು. ನಾನು ಮಂತ್ರಿಯಾದ ಸಂದರ್ಭದಲ್ಲಿಯೇ ಈ ತೀರ್ಪನ್ನು ಹೈಕೋರ್ಟ್ ನೀಡಿರುವುದು ನನಗೆ ಸಂತಸವನ್ನು ತಂದುಕೊಟ್ಟಿದೆ ಇನ್ನು ಮುಂದೆಯೂ ಸರ್ಕಾರ ಹಿಂದುತ್ವದ ಪರ ಕೆಲಸವನ್ನು ಮಾಡುವಂತೆ ಕೋರಿಕೊಳ್ಳುತ್ತೇನೆ ಎಂದರು.
ತನು ಕೊಟ್ಟಿಗೆಹಾರ, ವರದಿಗಾರರು.


0 Comments