ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಯ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಹಾಗೂ ಗಾಂಜಾ ವಶಪಡಿಸಿಕೊಂಡು ಅವರನ್ನು ಬಂಧಿಸಿದ್ದರು, ಅಂತಹುದೇ ಇನ್ನೊಂದು ಘಟನೆ ಮೂಡಿಗೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಸುಂಡೆಕೆರೆ ಹಳ್ಳದ ಸಮೀಪದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಸಾಗರ್ ಹಾಗೂ ರಂಜನ್ ಡಿಸೋಜಾ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಭಾನುವಾರ ಮೂಡಿಗೆರೆ ಪಟ್ಟಣದ ಸುಂಡಕೆರೆ ಹಳ್ಳದ ಸಮೀಪ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಣಿಕೆ ನಡೆಯುತ್ತಿದ್ದ ಕುರಿತಾಗಿ ಖಚಿತ ಮಾಹಿತಿಯನ್ನು ಆಧರಿಸಿದ ಮೂಡಿಗೆರೆ ಅಬಕಾರಿ ಪೊಲೀಸರು, ದಾಳಿ ನಡೆಸಿ, 130 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಪ್ರದೀಪ್, ಅಬಕಾರಿ ನಿರೀಕ್ಷಕ ಲೋಕೇಶ್ ಸಿ, ಅಬಕಾರಿ ಮುಖ್ಯಪೇದೆ ಎಚ್.ಸಿ. ಸಂತೋಷ್, ಅಬಕಾರಿ ಪೇದೆ ಶಂಕರ ಗುರುವ, ಚಾಲಕರಾದ ಪ್ರಸನ್ನಕುಮಾರ್ ಇದ್ದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments