ಕೊಪ್ಪ:(ನ್ಯೂಸ್ ಮಲ್ನಾಡ್ ವರದಿ) ಸಾಗುವಳಿ ಚೀಟಿಯನ್ನು ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವ ವರ್ತನೆಯನ್ನು ಆರೋಪಿಸಿ ಶಾಸಕ ಟಿ.ಡಿ ರಾಜೇಗೌಡ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಮೇಗುಂದ ಹೋಬಳಿಯ 68 ಜನರಿಗೆ ಸಾಗುವಳಿ ಚೀಟಿಯನ್ನು ನೀಡಲು ಅಧಿಕಾರಿಗಳು ಹಿಂದೇಟುಹಾಕುತ್ತಿದ್ದಾರೆ, ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಮಲೆನಾಡಿನಲ್ಲಿ ಜನರು ಜೀವನವನ್ನು ನಡೆಸಲು ಒಂದಿಷ್ಟು ಜಾಗವನ್ನು ಒತ್ತುವರಿ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಅವರ ಆದಾಯದ ಮೂಲವು ಅದೇ ಆಗಿರುವುದರಿಂದ ಜಮೀನಿನ ಹಕ್ಕುಪತ್ರವನ್ನು ನೀಡಬೇಕು ಎಂದು ತಹಸೀಲ್ದಾರ್ ಪರಮೇಶ್ ರವರನ್ನು ತರಾಟೆಗೆ ತೆಗೆದುಕೊಂಡರು.
ಮೇಗುಂದ ಹೋಬಳಿಗೆ ಸಂಬಂಧಪಟ್ಟ 68 ಹಕ್ಕುಪತ್ರಗಳನ್ನು ಒಂದು ವಾರದೊಳಗೆ ನೀಡದಿದ್ದರೆ ಕಚೇರಿಯ ಎದುರು ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಟಿ. ಡಿ. ರಾಜೇಗೌಡ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಸ್ಥಿರಿಕರಣಗೊಂಡ ಎಲ್ಲಾ ಕಡತಗಳಿಗೂ ಕೂಡಲೇ ಸಾಗುವಳಿ ಚೀಟಿಯನ್ನು ನೀಡಿ, ಅರಣ್ಯ ಇತರ ಕಾಯ್ದೆಗಳು ಅಡ್ಡಿ ಬಂದರೆ ಸಮಿತಿಯ ಅಧ್ಯಕ್ಷ ನಾನಿದ್ದೇನೆ ಕಾನೂನು ಸಮಸ್ಯೆಯಾದರೆ ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ನುಗ್ಗಿ ಮಂಜುನಾಥ್, ಮರಿಯಪ್ಪ, ಗೋಪಾಲಕೃಷ್ಣ, ಓಣಿತೋಟ ರತ್ನಾಕರ್, ಅಶ್ವಥ್, ಅಮ್ಜದ್, ನಾಗೇಶ್, ಅಮೀನ್, ಇತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



0 Comments