ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಕೆರೆಗೆ ಈಜಲು ತೆರಳಿದ್ದ ಯುವಕ ಮೃತಪಟ್ಟ ದುರ್ಘಟನೆ ಚಿಕ್ಕಮಗಳೂರು ನಗರದ ಹೊರ ವಲಯದ ಕೆಂಪನಹಳ್ಳಿ ಸಮೀಪದ ಚಂದ್ರಕಟ್ಟೆಯಲ್ಲಿ ನಡೆದಿದೆ. 

ಕೆರೆಗೆ ಈಜಲೆಂದು ಮೂವರು ಬಾಲಕರು ತೆರಳಿದ್ದರು, ಎಲ್ಲರೂ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೃತಬಾಲಕನನ್ನು ಸುಹಾನ್ ಎಂದು ಗುರುತಿಸಲಾಗಿದೆ, ಆರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ, ಆರಕ್ಷಕರು ಧಾವಿಸಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಕೆರೆಯಲ್ಲಿ ಸಂಪೂರ್ಣವಾಗಿ ನೀರು ತುಂಬಿತ್ತು, ಅಗ್ನಿಶಾಮಕ ಸಿಬ್ಬಂದಿಗಳು ಮೃತ ಸುಹಾನ್ ನ ಶರೀರವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.