ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಮಾದಕ ವಸ್ತು ಸೇವನೆ ಮಾಡುವವರನ್ನು ಪತ್ತೆ ಹಚ್ಚುವ  ದೊಡ್ಡ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

ಶಿವಮೊಗ್ಗದ ಪೊಲೀಸ್ ಅಧಿಕಾರಿಗಳು ಮಾದಕ ವಸ್ತುಗಳನ್ನು ಸೇವಿಸುವ ಆರೋಪಿಗಳನ್ನು ಪತ್ತೆ ಹಚ್ಚಲು ಗಾಂಜಾ ಟೆಸ್ಟ್ ಕಿಟ್ ಮುಂದಾಗಿದ್ದಾರೆ. ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಂಜಾ ಟೆಸ್ಟಿಂಗ್ ಕಿಟ್ ಇಟ್ಟಿರುವ ಪೊಲೀಸರು, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಗಾಂಜಾ ಸೇವನೆ ಮಾಡುವವರನ್ನು ಪತ್ತೆಹಚ್ಚಲಾರಂಭಿಸಿದ್ದಾರೆ. ಟೆಸ್ಟಿಂಗ್ ಕಿಟ್ ಇಟ್ಟ ಕೆಲವೇ ದಿನದಲ್ಲಿ ಪಾಸಿಟಿವ್ ಬಂದ 9 ಜನರನ್ನು ಪೊಲೀಸರು ಬಂಧಿಸಿದ್ದು, 8 ಪ್ರಕರಣ ದಾಖಲಾಗಿವೆ.

ಗಾಂಜಾ ಮಾರಾಟದ ಬಗ್ಗೆ ಹೆಚ್ಚು ದೂರು ಬಂದ ಏರಿಯಾಗಳನ್ನೇ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ಗಾಂಜಾ ಸೇವಿಸಿರಬಹುದು ಎಂಬ ಅನುಮಾನ ಬಂದ ಯುವಕರನ್ನು ಕರೆತಂದು ಯೂರಿನ್ ಟೆಸ್ಟ್ ಅನ್ನು ಗಾಂಜಾ ಪತ್ತೆ ಕಿಟ್ ಮೂಲಕ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ, ಭದ್ರಾವತಿ, ಸೇರಿದಂತೆ ಹಲವು ತಾಲೂಕುಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ರಾಜ್ಯದ ಯುವಜನತೆಯನ್ನು ಅಶಕ್ತ ಮಾಡುವ ಉದ್ದೇಶದಿಂದ ಈ ರೀತಿಯಾದ ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ, ಆದಷ್ಟು ಶೀಘ್ರವಾಗಿ ಎಲ್ಲಾ ವ್ಯಸನಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.