ಚಿಕ್ಕಮಗಳೂರು : ಭಾರತೀಯ ಹವಾಮಾನ ಇಲಾಖೆ ಹಾಗೂ ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಮಲೆನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಕುರಿತು ರೈತರಿಗೆ ಮುನ್ಸೂಚನೆ ನೀಡಿದೆ.
ಹವಾಮಾನ ವರದಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮುಂದಿನ ಎರಡು ಮೂರು ದಿನಗಳು ಮೋಡ ಕವಿದ ವಾತಾವರಣ ಹಾಗೂ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ಸಂಪರ್ಕದ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾಕ್ಟರ್ ಕೃಷ್ಣಮೂರ್ತಿ ಎ.ಟಿ ತಿಳಿಸಿದ್ದಾರೆ.
ತಾಲೂಕುವಾರು ಹವಾಮಾನ ವರದಿ ಇಂತಿದೆ. ಮೂಡಿಗೆರೆ, ಕೊಪ್ಪ , ನರಸಿಂಹರಾಜಪುರ ,ಹಾಗೂ ಚಿಕ್ಕಮಗಳೂರು ತಾಲೂಕುಗಳಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಶೃಂಗೇರಿ ತಾಲೂಕಿನಲ್ಲಿ ಸಾಧಾರಣದಿಂದ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಹಾಗೂ ರೈತರು ಗೊಬ್ಬರ ಹಾಕುವುದು ಇತರೆ ರಾಸಾಯನಿಕ ಸಿಂಪಡಿಸುವುದನ್ನು ಮುಂದಿನ ಎರಡು ಮೂರು ದಿನಗಳಿಗೆ ಮುಂದೂಡುವುದು ಸೂಕ್ತ ಎಂದು ತಿಳಿಸಿದ್ದಾರೆ. ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಮುಂದಿನ ಎರಡು-ಮೂರು ದಿನಗಳು ಮೋಡ ಕವಿದ ವಾತಾವರಣ ಜೊತೆಗೆ ಸಾಧಾರಣ ಮಳೆಯಾಗುವ ಸಂಭವವಿದೆ. ಆದ್ದರಿಂದ ರೈತರು ಇನ್ನೂ ಎರಡು ಮೂರು ದಿನಗಳ ಕಾಲ ಈರುಳ್ಳಿ ಕೊಯ್ಲನ್ನು ಮುಂದೂಡುವುದು ಸೂಕ್ತ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments