ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ಪಾವತಿಸುವ ಕುರಿತಾಗಿ ಹಲವು ಗೊಂದಲಗಳು ವಿರೋಧಗಳು ಈ ಹಿಂದೆ ವ್ಯಕ್ತವಾಗಿತ್ತು. ಈ ವಿಚಾರಕ್ಕೆ ತೆರೆ ಎಳೆದಿರುವ ಶಾಸಕ ಸಿಟಿ ರವಿ, ಎಂ. ಜಿ ರಸ್ತೆಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವ ವರೆಗೂ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿಕ್ಕಮಗಳೂರು ನಗರದ ಮುಖ್ಯ ವ್ಯಾವಹಾರಿಕ ರಸ್ತೆಯಾದ ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಶುಲ್ಕ ನೀಡಬೇಕೆಂದು ಈ ಹಿಂದೆ ನಗರಸಭೆ ಪ್ರಸ್ತಾಪ ಮಾಡಿತ್ತು, ಈ ಕುರಿತಾಗಿ ಸ್ಥಳೀಯರು, ವರ್ತಕರು ಸೇರಿದಂತೆ ಹಲವಾರು ಜನ ವಿರೋಧ ಮಾಡಿದ್ದರು. ಈ ಕುರಿತಾಗಿ ವರ್ತಕರ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಿದ ಚಿಕ್ಕಮಗಳೂರಿನ ಶಾಸಕ ಸಿ.ಟಿ ರವಿ, ವರ್ತಕರ ಅಭಿಪ್ರಾಯ ಸಂಗ್ರಹಿಸಿ ನಂತರದಲ್ಲಿ ಹೇಳಿಕೆ ನೀಡಿದ್ದಾರೆ.
ಬರುವ ನವೆಂಬರ್ ತಿಂಗಳಿನ 27 ನೆ ತಾರೀಖಿನಂದು ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಬಹಿರಂಗ ಹರಾಜು ಪ್ರಕ್ರಿಯೆಗೆ ಕರೆಯಲಾಗಿದೆ. ಆದರೆ ಅದಕ್ಕಿಂತ ಮುಂಚೆ ಪ್ರತ್ಯೇಕವಾಗಿ ವಾಹನ ನಿಲುಗಡೆಗೆ ಮಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು, ಪಟ್ಟಣದ ಫುಟ್ಪಾತ್ ಗಳಿಗೆ ಟೈಲ್ಸ್ ಅಳವಡಿಸುವುದು ಮುಂತಾದ ಮುಖ್ಯ ಸೌಲಭ್ಯಗಳನ್ನು ಕಲ್ಪಿಸಿ ತದ ನಂತರವೇ ಶುಲ್ಕ ವಸೂಲಿಗೆ ಮುಂದಾಗುವುದು ಎಂಬ ತೀರ್ಮಾನವನ್ನು ಪ್ರಕಟಿಸಿದರು.
ವಾಹನ ದಟ್ಟಣೆ ಹೆಚ್ಚಾಗಿರುವ ಐಜಿ ರಸ್ತೆ ಹಾಗೂ ಎಂ.ಜಿ ರಸ್ತೆಯ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಶೀಘ್ರವಾಗಿ ಹಳೇ ಜೈಲ್ ರಸ್ತೆಯ ಆವರಣದಲ್ಲಿ ಪಾರ್ಕಿಂಗ್ ಲಾಟ್ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಅದೇ ರೀತಿ ಚಿಕ್ಕಮಗಳೂರು ನಗರದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಇದೇ ನವೆಂಬರ್ ಒಂದನೇ ತಾರೀಖಿನಂದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೆ ತೆರಳಿ ಸಮಸ್ಯೆಯನ್ನು ಪರಿಹರಿಸುವ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

0 Comments