ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್ ನ ಜಿಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಅಧ್ಯಕ್ಷರಾದ ಕಾರ್ತಿಕ್ ಜಿ ಚೆಟ್ಟಿಯಾರ್ ಮನವಿ ಮಾಡಿದ್ದಾರೆ.

ನಳೀನ್ ಕುಮಾರ್ ಕಟೀಲ್ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಹಾಗೂ ಸಂಸದರಾಗಿ ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರರಹಿತ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಕಟೀಲ್‌ರವರ ಕೊಳಕು‌ ಮನಃಸ್ಥಿತಿಯನ್ನು ಅನಾವರಣ ಮಾಡಿದೆ. ಈ ರೀತಿಯಾದ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಕಟೀಲ್‌ರವರಿಗೆ ಯಾವ ನೈತಿಕತೆಯಿದೆ. ರಾಜೀವ್‌ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಗ್ಗಳಿಕೆ ನೆಹರೂ ಕುಟುಂಬದವರದ್ದು. ದೇಶಕ್ಕಾಗಿ ಬಿಜೆಪಿಯವರ ತ್ಯಾಗವೇನು, ಕಟೀಲ್‌ರವರ ಕೊಡುಗೆಯೇನು ಎಂದು ಪ್ರಶ್ನಿಸಿದ್ದಾರೆ.

ಶ್ರೀ ರಾಹುಲ್ ಗಾಂಧಿರವರ ವಿರುದ್ಧ ನಳಿನ್ ಕುಮಾರ್ ಕಟೀಲ್ ರವರು ನೀಡಿರುವ ಕೀಳು ಮಟ್ಟದ  ಸುಳ್ಳು ಹೇಳಿಕೆಯನ್ನು ತಕ್ಷಣವೇ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಕಾರ್ತಿಕ್ ಅವರು ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿರವರನ್ನು  ಡ್ರಗ್ ಅಡಿಕ್ಟ್ ಮತ್ತು ಪೆಡ್ಲರ್ ಎಂದು ಕಟೀಲ್ ರವರು ಬಳಸಿರುವಂತಹ ಭಾಷೆಯನ್ನು ಗಮನಿಸಿದಾಗ ಅವರು ಬೆಳೆದುಬಂದಿರುವ ಸಂಸ್ಕಾರವನ್ನು ತೋರಿಸುತ್ತಿದೆ ಮತ್ತು ಶ್ರೀ ಕಟೀಲ್ ರವರು ಒಬ್ಬ ಸಂಸದರಾಗಿ ಮತ್ತು  ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ರಾಜ್ಯದ ಹಾಗೂ ದೇಶದ

ದುರದೃಷ್ಟಕರದ  ಸಂಗತಿಯಾಗಿದೆ, ನಳೀನ್ ಕುಮಾರ್ ಕಟೀಲ್ ಈ ಸ್ಥಾನದಲ್ಲಿ  ಮುನ್ನಡೆಯಲು ಅನರ್ಹರಾಗಿದ್ದಾರೆ ಆದ್ದರಿಂದ ಶ್ರೀಕಟೀಲ್ ರವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಮಾಡಬೇಕೆಂದು ರಾಷ್ಟ್ರಪತಿಗಳಿಗೆ ಒತ್ತಾಯಿಸುತ್ತೇನೆ ಎಂದರು.

ಹರಕುಬಾಯಿ ರಾಜಕಾರಣಿಯಾಗಿ ಬಾಲಿಶತನದ ಹಾಗೂ ಜೋಕರ್ ರೀತಿಯ ಹೇಳಿಕೆನೀಡಿರುವ ಶ್ರೀ ಕಟೀಲ್ ಅವರಿಗೆ ಮಾನಸಿಕ ಸ್ಥಿಮಿತತೆ ಇಲ್ಲವೇ ಇಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದರು.  ನಾಲಿಗೆಯ ಚಪಲಕ್ಕೆ ಮಾತನಾಡುತ್ತಿರುವ ಕಟೀಲ್ ಅವರು ಪದೇ - ಪದೇ ಸುಳ್ಳುಗಳನ್ನು ಹೇಳುತ್ತ ಅವರು ಸಂಸದರ ಸ್ಥಾನಕ್ಕೆ ಅಗೌರವ ತರುವಂತ ಕೆಲಸಕ್ಕೆ ಕೈ ಹಾಕಿದ್ದಾರೆ ಅವರನ್ನು ಸಂಸದ ಸ್ಥಾನದಿಂದ ವಜಾ ಸಹಿತ ಬಿಜೆಪಿ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿ ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಗೊಳ್ಳಲು ಒತ್ತಾಯಿಸುತ್ತಿದ್ದೇನೆ ಎಂದರು.