ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಸುಸಜ್ಜಿತ ಸರ್ಕಾರಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಇತ್ತೀಚೆಗಷ್ಟೆ ಶೃಂಗೇರಿ ಬಂದ್ ಗೆ ಕರೆ ನೀಡಿತ್ತು ಹಾಗೂ ಬಂದ್ ಅನ್ನು ಯಶಸ್ವಿಯಾಗಿ ನಡೆಸಿತ್ತು.

ಬಂದ್ ನ ದಿನ ಶೃಂಗೇರಿಗೆ ಉಪನೋಂದಣಾ ಅಧಿಕಾರಿ ಡಾ. ನಾಗರಾಜ್ ಅವರು ಆಗಮಿಸಿ ಹೋರಾಟ ಸಮಿತಿಯ ಮನವಿಯನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಶೃಂಗೇರಿಗೆ ಬಂದಾಗ ಜಿಲ್ಲಾಧಿಕಾರಿಗಳು ಸೋಮವಾರ ಸಮಸ್ಯೆ ಬಗೆಹರಿಸಲು ಶೃಂಗೇರಿಗೆ ಆಗಮಿಸುತ್ತಿದ್ದು ಅಂದೇ ಸಮಿತಿಯ ಸದಸ್ಯರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು, ಅದರಂತೆಯೆ ಇಂದು ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರು ಶೃಂಗೇರಿಗೆ ಬಂದು ಆಸ್ಪತ್ರೆ ಹೋರಾಟ ಸಮಿತಿಯ ಸದಸ್ಯರ ಅಹವಾಲುಗಳನ್ನು ಸ್ವೀಕರಿಸಿದರು ಮತ್ತು ಒಂದು ತಿಂಗಳ ಒಳಗೆ ಜಾಗದ ಮಂಜೂರಾತಿ ಮಾಡಿ ಹಾಗೂ ಅನುದಾನ ಬಿಡುಗಡೆಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಸಮಸ್ಯೆ ಪರಿಹರಿಸುವುದಾಗಿ ಆಶ್ವಾಸನೆ ನೀಡಿದರು.

ಆಸ್ಪತ್ರೆಗೆ ಅವಶ್ಯಕವಾಗಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸಿ :

ಈಗಿರುವ ಸರ್ಕಾರಿ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಡಯಾಲಿಸಿಸ್, ಸಿಟಿ ಸ್ಕ್ಯಾನಿಂಗ್, ಮುಂತಾದ ಅತ್ಯಾವಶ್ಯಕ ಸೌಲಭ್ಯಗಳನ್ನು ಶೀಘ್ರವಾಗಿ ಕಲ್ಪಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇಂದೇ ಆಸ್ಪತ್ರೆಯ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಕುರಿತು ಕ್ರಮ ವಹಿಸುವುದಾಗಿ ತಿಳಿಸಿದರು.