ಚಿಕ್ಕಮಗಳೂರು : ಅನ್ಯಜಾತಿಯ ಯುವಕನನ್ನು ಪ್ರೇಮಿಸಿದ ಕಾರಣಕ್ಕೆ ತಂದೆ ತನ್ನ ಮಗಳನ್ನೇ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ನಡೆದಿದೆ.
ಮೃತ ಯುವತಿಯನ್ನು ರಾಧಾ (18 ) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಚಂದ್ರಪ್ಪ ಎಂದು ತಿಳಿದುಬಂದಿದ್ದು ಇವರು ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಕೆಂಚೇಗೌಡ ಕೊಪ್ಪಲಿನ ನಿವಾಸಿಗಳಾಗಿದ್ದಾರೆ. ರಾಧಾ ತನ್ನ ಊರಿನ ಅನ್ಯಜಾತಿ ಯುವಕನನ್ನು ಪ್ರೀತಿಸುತ್ತಿದ್ದರು ವಿಷಯ ತಿಳಿದು ಮನೆಯವರು ಜಾಗ ಬದಲಾದರೆ ಮಗಳು ಯುವಕನನ್ನು ಮರೆಯಬಹುದು ಎಂದು ರಾಧಾಳನ್ನು ಚನ್ನಗಿರಿ ತಾಲ್ಲೂಕಿನ ಮಲ್ಲಿಗೆರೆಯ ತನ್ನ ಸಹೋದರಿ ಶಾಂತಮ್ಮನವರ ಮನೆಯಲ್ಲಿ ಬಿಟ್ಟಿದ್ದರು.
ಹಬ್ಬಕ್ಕೆಂದು ಮಗಳನ್ನು ಊರಿಗೆ ಬೈಕಿನಲ್ಲಿ ಕರೆತರುವ ವೇಳೆ ಯುವಕನನ್ನು ಮರೆಯುವಂತೆ ಮಗಳಿಗೆ ಬುದ್ದಿವಾದವನ್ನು ಹೇಳಿದರು ಆದರೂ ಪಟ್ಟು ಬಿಡದ ಯುವತಿ ಆ ಯುವಕನನ್ನೇ ಮದುವೆ ಆಗುವುದಾಗಿ ವಾದ ಮಾಡಿದ್ದಾಳೆ ಇದರಿಂದ ಕೋಪಗೊಂಡ ತಂದೆ ಬೀರೂರು ಹೊರವಲಯದ ರೈಲ್ವೆ ಗೇಟ್ ಬಳಿ ಜನರಿಲ್ಲದಿರುವುದನ್ನು ಗಮನಿಸಿ ಮಗಳ ತಲೆಮೇಲಿದ್ದ ವೇಲ್ ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾರೆ. ರಾತ್ರಿ 2-30 ರ ಹೊತ್ತಿಗೆ ಊರನ್ನು ತಲುಪಿದ ಚಂದ್ರಪ್ಪ ಮನೆಯವರಿಗೆ ವಿಷಯವನ್ನು ತಿಳಿಸಿ ರೋಧಿಸಿದ್ದಾರೆ ನಂತರ ಮನೆಯವರು ಶಿಕಾರಿಪುರ ಠಾಣೆಗೆ ಕರೆದೋಯ್ದಿದ್ದಾರೆ, ಹತ್ಯೆ ನಡೆದಿರುವುದು ಬೀರೂರು ವ್ಯಾಪ್ತಿಯಲ್ಲಿ ಆಗಿರುವುದರಿಂದ ಅವರನ್ನು ಬೀರೂರು ಠಾಣೆಗೆ ಕರೆತಂದಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ, ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನು ಕೊಟ್ಟಿಗೆಹಾರ, ವರದಿಗಾರರು

0 Comments