ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಕರ್ನಾಟಕದ ಮನೆ ಮಗ, ಕನ್ನಡ ಸಿನಿಮಾ ಜಗತ್ತಿನ ಅಜಾತ ಶತ್ರು ಎಂಬಂತೆ ಕಾಣುತ್ತಿರುವ ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿಯು ಎಲ್ಲರನ್ನೂ ದಿಗ್ಭ್ರಮೆ ಗೊಳಿಸಿದೆ ಹಾಗೂ ಕರ್ನಾಟಕದ ಜನತೆಯ ಮನೆಯಲ್ಲಿ  ಶೋಕದ ವಾತಾವರಣ ನಿರ್ಮಾಣ ಮಾಡಿದೆ.

ತಮ್ಮ ನೆಚ್ಚಿನ ನಾಯಕ ನಟನ ಸಾವಿನ ಸುದ್ದಿಯನ್ನು ಕೇಳಿ ಅಪ್ಪುವಿನ ಹಲವು ಅಭಿಮಾನಿಗಳಿಗೆ ಹೃದಯಾಘಾತವಾಗಿದೆ, ಇನ್ನೂ ಕೆಲವರು ಈ ದುಃಖವನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂತಹುದೇ ಒಂದು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ರಾಂಪುರದಲ್ಲಿ ಅಭಿಮಾನಿ ಯೋರ್ವ ಪುನೀತ್ ರಾಜ್ ಕುಮಾರ್ ಅವರ ಸಾವಿನ ನೋವನ್ನು ತಡೆಯಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಂಪುರದ ನಿವಾಸಿ ಶರತ್ ಎಂಬಾತ ಮೃತ ವ್ಯಕ್ತಿ. ಮನೆಯಲ್ಲಿ ಟಿವಿ ನೋಡಿಕೊಂಡು ಅಳುತ್ತಿದ್ದ ವ್ಯಕ್ತಿಯನ್ನು ಕುಟುಂಬದ ಸದಸ್ಯರು ಸಂತೈಸಿದರು ಕೂಡ ಮನನೊಂದು ಪುನೀತ್ ಅವರ ಸಾವನ್ನು ಅರಗಿಸಿ ಕೊಳ್ಳಲಾರದೆ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡು ಕುಟುಂಬಸ್ಥರನ್ನು ಅಗಲಿದ್ದಾರೆ.

ಆದರೆ ಮೃತ ಶರತ್ ಕುಟುಂಬಸ್ಥನಾಗಿದ್ದು ಅವರಿಗೆ ಒಂದು ಮಗುವಿದೆ ಹಾಗೂ ಅವರ ಪತ್ನಿಯು ಎಂಟು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಪತ್ನಿ ಹಾಗೂ ಮಗುವನ್ನು ತೊರೆದು ಹೋದ ಶರತ್ ಅವರ ಸಾವಿನ ತೀರ್ಮಾನದ ಕುರಿತು ಹಲವು ಅನುಮಾನಗಳು ಕಾಡುತ್ತಿವೆ. ಅವರನ್ನು ನೆನೆದುಕೊಂಡು ಹೆಂಡತಿ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.