ಹಾಸನ :(ನ್ಯೂಸ್ ಮಲ್ನಾಡ್ ವರದಿ) ಉಪ್ಪಿಗೆ ರೆಡ್ ಆಕ್ಸೈಡ್ ಅನ್ನು ಮಿಕ್ಸ್ ಮಾಡಿ, ಅದನ್ನೇ ಪೊಟ್ಯಾಷ್ ಗೊಬ್ಬರ ಎಂದು ರೈತರಿಗೆ  ಮಾರಾಟ ಮಾಡಿ ವಂಚನೆ ಮಾಡುತ್ತಿದ್ದ ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ರೈತರಿಗೆ ಹಲವಾರು ರೀತಿಗಳಲ್ಲಿ ವಂಚನೆ ಮಾಡುವ ಮೂಲಕ ಹಲವಾರು ಆರೋಪಿಗಳು ರೈತರನ್ನು ಪೇಚಿಗೆ ಸಿಲುಕಿಸುತಿದ್ದಾರೆ.  

ಹಾಸನದಲ್ಲಿ ನಕಲಿ ಗೊಬ್ಬರವನ್ನು ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದ ಆರೋಪಿಗಳನ್ನು ಹಾಸನದ  ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆ ಪಿಎಸ್‍ಐ ಅಜಯ್ ಅವರ ನೇತೃತ್ವದ ತಂಡ ಈ ಪ್ರಕರಣವನ್ನು ಬೇಧಿಸಿದೆ. ಈ ಕುರಿತು ಇಬ್ಬರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳ ವಿಚಾರಣೆ ಸಹ ಆರಂಭವಾಗಿದೆ.

ನಕಲಿ ಗೊಬ್ಬರ ತಯಾರಿ : 

ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಅದನ್ನು ಮಿಶ್ರಣ ಮಾಡಿ, ಪೊಟ್ಯಾಷ್ ಗೊಬ್ಬರದ ಚೀಲವನ್ನೇ ಹೋಲುವ ಚೀಲಗಳನ್ನು ತಯಾರಿಸಿ ರೈತರಿಗೆ ಮಾರಾಟ ನಡೆಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಆನಂದ್ ಮತ್ತು ಅವಿನಾಶ್ ಎಂಬ ಇಬ್ಬರು ಬಂಧಿತ ಆರೋಪಿಗಳು. ಮೈಸೂರು ಸಮೀಪದ ಶೆಡ್ ಒಂದರಲ್ಲಿ ತಯಾರಾಗುವ ನಕಲಿ ಗೊಬ್ಬರವನ್ನು, ವಾಹನಕ್ಕೆ ತುಂಬಿಕೊಂಡು  ಎಲ್ಲೆಡೆ ಸಾಗಾಟ ನಡೆಸಲಾಗುತಿತ್ತು ಎಂದು ತಿಳಿದುಬಂದಿದೆ. ಬಂಧಿತರಿಂದ 50 ಕೆ.ಜಿ ತೂಕದ ಒಟ್ಟು 56 ನಕಲಿ ಗೊಬ್ಬರ ಚೀಲಗಳನ್ನು ವಶ ಪಡಿಸಿಕೊಳ್ಳಲಾಗಿದೆ.