ಕಡೂರು :(ನ್ಯೂಸ್ ಮಲ್ನಾಡ್ ವರದಿ) ಲಂಚ ಪಡೆದ ಪುರಸಭೆಯ ಮುಖ್ಯಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ದಾಖಲೆ ಸಮೇತ ಸೆರೆಹಿಡಿದಿದ್ದಾರೆ.
ಕಡೂರು ಪುರಸಭೆಯ ಮುಖ್ಯಾಧಿಕಾರಿ ಹೆಚ್ ಎನ್ ಮಂಜುನಾಥ್ ಅವರ ಮೇಲೆ ವ್ಯಕ್ತಿಯೋರ್ವರು ನೀಡಿದ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿ ಗೀತಾ ಮತ್ತು ಅವರ ತಂಡದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಭ್ರಷ್ಟ ಪುರಸಭೆಯ ಮುಖ್ಯಾಧಿಕಾರಿ ಹೆಚ್ ಎನ್ ಮಂಜುನಾಥ್ ಅವರನ್ನು ಸೆರೆ ಹಿಡಿದಿದ್ದಾರೆ.
ಕಡೂರು ಪುರಸಭೆ ವ್ಯಾಪ್ತಿಯ ನಿವಾಸಿಯೋರ್ವರು ತಮ್ಮ ಪತ್ನಿಗೆ ಬೇರೆಯವರಿಂದ ದಾನವಾಗಿ ಬಂದಿದ್ದ ನಿವೇಶನದ ಖಾತೆಯನ್ನು ಪತ್ನಿಯ ಹೆಸರಿಗೆ ಬದಲಾಯಿಸಿ ಕೊಡಲು ಅರ್ಜಿ ಸಲ್ಲಿಸಿದ್ದರು, ನಂತರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ್ ರನ್ನು ಭೇಟಿ ಮಾಡಿ ಈ ಕುರಿತು ಮಾತನಾಡಿದಾಗ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡಿದರೆ ಖಾತೆ ಬದಲಾವಣೆ ಮಾಡಿ ಕೊಡುವುದಾಗಿ ಹೇಳಿ, ನಂತರದಲ್ಲಿ ಹತ್ತು ಸಾವಿರ ರೂಪಾಯಿ ನೀಡಿದರೆ ಖಾತೆಯನ್ನು ಬದಲಾವಣೆ ಮಾಡಿ ಕೊಡುವುದಾಗಿ ಹೇಳಿದ್ದಾರೆ.ಅಧಿಕಾರಿಯ ಈ ವರ್ತನೆಯಿಂದ ಬೇಸರಕ್ಕೊಳಗಾದ ರಘು ಅವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಗಮನಕ್ಕೆ ಈ ಕುರಿತು ದೂರನ್ನು ನೀಡಿದ್ದಾರೆ.
ದಾಖಲೆ ಸಮೇತ ಮಂಜುನಾಥ್ ಅವರನ್ನು ಬಂಧಿಸಿದ ಎಸಿಬಿ ಅಧಿಕಾರಿಗಳು :
ಈ ಘಟನೆಗೆ ಸಂಬಂಧಿಸಿದಂತೆ ನಿನ್ನೆ (29/10/21) ರಂದು ಹತ್ತು ಸಾವಿರ ರೂಪಾಯಿಗಳನ್ನು ಮುಖ್ಯಾಧಿಕಾರಿ ಮಂಜುನಾಥ್ ಅವರು ಪಡೆಯುವಾಗಲೇ ಹಣದೊಂದಿಗೆ ಅವರನ್ನು ಹಿಡಿದ ಎಸಿಬಿ ಅಧಿಕಾರಿಗಳು ಕಚೇರಿಯಲ್ಲಿದ್ದ ದಾಖಲೆಗಳನ್ನು ಪರಿಶೀಲನೆ ಮಾಡಿ ಕೂಡಲೇ ಬಂಧಿಸಿದ್ದಾರೆ ಹಾಗೂ ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ದಾಳಿಯಲ್ಲಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಾದ ಅನಿಲ್ ಕೆ.ಜಿ, ರಾಥೋಡ್, ಮಂಜುನಾಥ್, ದೇವರಾಜ್, ಅರ್ಪಿತ,ಸತೀಶ್,ಪ್ರಸಾದ್, ವೇದಾವತಿ,ಪ್ರಕಾಶ್, ಅನಿಲ್ ಇದ್ದರು.

0 Comments