ಬೆಂಗಳೂರು : (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಸಿ.ಜಿ.ಕೆ ರಂಗ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯಿಂದ ಶೃಂಗೇರಿಯ ಗುತ್ತಳಿಕೆ ಕೇಶವ ಆಯ್ಕೆಯಾಗಿದ್ದಾರೆ.
ರಂಗಭೂಮಿಯಲ್ಲಿ ಇಪ್ಪತ್ತೈದು ವರ್ಷಕ್ಕೂ ಅಧಿಕ ಅನುಭವ ಹೊಂದಿದ ಗುತ್ತಳಿಕೆ ಕೇಶವ ಮೂರ್ತಿ ಅವರು ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಐದಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿ ಹಾಗೇ ಐದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಮತ್ತು ಸಾಮಾಜಿಕ ಹೀಗೆ ಎಲ್ಲಾ ಪ್ರಕಾರಗಳಲ್ಲಿ ನಟಿಸಿದ ಖ್ಯಾತಿ ಶ್ರೀಯುತ ಗುತ್ತಳಿಕೆ ಕೇಶವ ಅವರದ್ದಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಕಥೆ ಆಧಾರಿತ ಗಂಟು ಅಥವಾ ಗುಪ್ತಧನ ಇದರ ನಾಯಕ ನಟನಾಗಿ ಉತ್ತಮವಾಗಿ ಪಾತ್ರವನ್ನು ನಿಭಾಯಿಸಿ ಗಮನ ಸೆಳೆದವರು ಕೇಶವ, ಈ ನಾಟಕವನ್ನು ದೂರದರ್ಶನ ಕೂಡಾ ಚಿತ್ರೀಕರಿಸಿದೆ. ಇದಲ್ಲದೇ ಅರಮನೆ ಕಥಾಪ್ರಸಂಗದ ಕೋಡಂಗಿ , ಗುಡುಗು ಹೇಳಿದ್ದೇನು ನಾಟಕದ ಲಕ್ಕ , ಶಕುನಿ ಮೊದಲಾದ ಪಾತ್ರಗಳು ಇವರಿಗೆ ಅಪಾರ ಹೆಸರು ತಂದುಕೊಟ್ಟಿವೆ.
ಇಂದಿನ ಜಾಲತಾಣ ದಲ್ಲಿ ಇವರ ಹಾಸ್ಯದ ತುಣುಕುಗಳು ಅತ್ಯಂತ ಜನಪ್ರಿಯ. 2009 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಏಕೆ ಹೀಗೆ ನಮ್ಮನಡುವೆ ಧಾರಾವಾಹಿಯ ಹಾಸ್ಯ ನಟನೆಗೆ ನಾಕೌಟ್ ಸಿನಿ ಅವಾರ್ಡ್ ಪಡೆದು ಮಲೆನಾಡಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ ಖ್ಯಾತಿ ಇವರಿಗಿದೆ.ಶ್ರೀ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್ ನ ಮೆಣಸೆ ಶಂಕರಹೆಗ್ಡೆ ಸ್ಮಾರಕ ರಂಗಪ್ರಶಸ್ತಿ ಪಡೆದಿದ್ದಾರೆ. ಮಲೆನಾಡ ಮೃದುತನ , ಸೌಜನ್ಯದ ಸಜ್ಜನಿಕೆಯ ವ್ಯಕ್ತಿತ್ವದ ಕೇಶವ ರೈತರೂ ಹೌದು. ಅಂಟಿಗೆ ಪಿಂಟಿಗೆ ಯ ಜಾನಪದ ಕಲಾವಿದರೂ ಹೌದು. ಈ ಮೂಲಕ ಜಾನಪದ ಸೊಗಡನ್ನು ಎಲ್ಲೆಡೆ ಪರಿಚಯಿಸುವ ಒಂದು ಉತ್ತಮ ಕೆಲಸವನ್ನು ಗುತ್ತಳಿಕೆ ಕೇಶವ ಅವರು ಮಾಡಿದ್ದಾರೆ.
ಅವರ ಮುಂದಿನ ಕಲಾ ಜೀವನವು ಯಶಸ್ಸಿನಿಂದ ಕೂಡಿರಲಿ,ಅತ್ಯುತ್ತಮವಾಗಿರಲಿ, ಮಲೆನಾಡಿನ ಕೀರ್ತಿಯನ್ನು ಇನ್ನಷ್ಟು ಉತ್ತುಂಗಕ್ಕೇರಿಸಲಿ ಎಂದು ಗ್ರಾಮೀಣ ಭಾಗದ ಕಲಾವಿದರು ಕೇಶವ ಅವರನ್ನು ಹಾರೈಸಿದ್ದಾರೆ.

0 Comments