ಚಿಕ್ಕಮಗಳೂರು : ಮಲೆನಾಡಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.

ನಿನ್ನೆಯೂ ಕೂಡ ಅತಿಯಾದ ಮಳೆ ಆಗಿದ್ದು, ಮಳೆಯಿಂದಾಗಿ ಮೂವರು ರೈತರ ಸುಮಾರು ಒಂದೂವರೆ ಎಕರೆ ಕಾಫಿ ತೋಟ ಕೊಚ್ಚಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ  ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದಲ್ಲಿ ನಡೆದಿದೆ.

ಸಂಜೆ ತೋಟದಲ್ಲಿ ಅಡ್ಡಾಡಿ ಮನೆಗೆ ಹೋಗಿದ್ದ ಸಣ್ಣ ಬೆಳೆಗಾರ ಬೆಳಗ್ಗೆ ತೋಟಕ್ಕೆ ಬರುವಷ್ಟರಲ್ಲಿ ತೋಟವೇ ಅಲ್ಲೋಲ-ಕಲ್ಲೋಲವಾಗಿತ್ತು. ತೋಟದ ಸ್ಥಿತಿಯನ್ನ ಕಣ್ಣಾರೆ ಕಂಡ ಸಣ್ಣ ಕಾಫಿ ಬೆಳೆಗಾರ ತಲೆ ಮೇಲೆ ಕೈ ಹೊತ್ತು  ಕೂತಿದ್ದಾನೆ. ಮುಳ್ಳೋಡಿ ಗ್ರಾಮದ ಮೂವರು ರೈತರ ತೋಟದ ಸ್ಥಿತಿ  ಇದೇ ರೀತಿ ಆಗಿದೆ. ಈ ರೀತಿಯಾಗಿ ತೋಟ ಕೊಚ್ಚಿ ಹೋಗಿರುವುದು ಇದೇ ಮೊದಲಲ್ಲ. ಕಳೆದ ಎರಡು ವರ್ಷವೂ ಸುರಿದ ಭಾರೀ ಮಳೆಗೆ ಕಳಸ ಭಾಗದ ಹಲವು ಬೆಳೆಗಾರರ ತೋಟ ಕೊಚ್ಚಿ ಹೋಗಿತ್ತು. ಈ ವರ್ಷ ರಾತ್ರಿ ವೇಳೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಸಣ್ಣ ಬೆಳೆಗಾರರು ಕಂಗಾಲಾಗಿದ್ದಾರೆ. ಮುಳ್ಳೋಡಿ ಗ್ರಾಮದ ಸೇತುವೆಯಲ್ಲಿ ನೀರು ಕಟ್ಟಿಕೊಂಡು ಸೇತುವೆ ಬಿದ್ದ ಪರಿಣಾಮ ತೋಟದಲ್ಲಿ ಹರಿದ ಭಾರೀ ಪ್ರಮಾಣದ ನೀರಿನಿಂದ ತೋಟ ಕೊಚ್ಚಿ ಹೋಗಿದೆ. ಅಷ್ಟೆ ಅಲ್ಲದೆ, ರಸ್ತೆ ಬದಿಯ ಮಣ್ಣು ಕುಸಿದಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲ. ರಸ್ತೆಯನ್ನಂತು ಕೇಳೋದೆ ಬೇಡ. ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅದಲ್ಲದೆ  ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಿಬರುವುದು ಬಹಳ ಕಷ್ಟವಾಗಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಮಳೆಯಿಂದಾಗಿ ಕಳೆದ ಎರಡು-ಮೂರು ವರ್ಷಗಳಿಂದ ನಿರಂತರವಾಗಿ ತೋಟವನ್ನ ಕಳೆದುಕೊಳ್ಳುತ್ತಿದ್ದೇವೆ, ಆದರೆ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ತೋಟ ಕಳೆದುಕೊಂಡು ಸಣ್ಣ ಬೆಳೆಗಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನ ಗಬ್ಗಲ್ ಸುತ್ತಮುತ್ತಲೂ ಭಾರೀ ಮಳೆ ಸುರಿದ ಪರಿಣಾಮ ಗಬ್ಗಲ್ ಗ್ರಾಮದ ಕಿರು ಸೇತುವೆ ಕೊಚ್ಚಿ ಹೋಗಿದ್ದು, ಹತ್ತಾರು ಹಳ್ಳಿಯ ಸಂಪರ್ಕ ಸೇತುವೆಯೇ ಕಳಚಿಬಿದ್ದಂತಾಗಿದೆ. ಮಲೆನಾಡಲ್ಲಿ ರಾತ್ರಿ ವೇಳೆ ಸುರಿಯುತ್ತಿರು ಭಾರೀ ಮಳೆಯಿಂದ ಮಲೆನಾಡಿಗರ ಜನಜೀವನ ಏರುಪೇರಾಗುತ್ತಿದೆ.


ನಿರ್ಮಾಣ ಹಂತದಲ್ಲಿದ್ದ ಮನೆಯ ಕಾಂಪೌಂಡ್ ಕುಸಿತ :

ಮೂಡಿಗೆರೆ ತಾಲೂಕಿನ ಮೇಗೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಕಾಂಪೌಂಡ್ ಸಹ ಕುಸಿತಗೊಂಡಿದೆ. ಸುನಿಲ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು ಮಳೆಯ ಆರ್ಭಟಕ್ಕೆ   ಮನೆಯ ಕಾಂಪೌಂಡ್ ಕುಸಿತವಾಗಿದೆ. ಈ ಹಿಂದೆಯೂ ಕೂಡ ಈ ಭಾಗದಲ್ಲಿ ಹಲವು ಮನೆಗಳು ಮಳೆಯ ಅಬ್ಬರಕ್ಕೆ ಕುಸಿತ ಗೊಂಡಿತ್ತು.

ತನು ಕೊಟ್ಟಿಗೆಹಾರ, ವರದಿಗಾರರು.