ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಗೆ ಪ್ರತೀ ವರ್ಷ ಒಂದಲ್ಲ ಒಂದು ರೋಗಗಳು ಬಂದು ಅಡಿಕೆಯ ಉಳಿವೇ ಇಲ್ಲದಂತೆ ಮಾಡುತ್ತಿದೆ.
ಅಡಿಕೆ ತೋಟವನ್ನು ನಂಬಿಕೊಂಡು ಜೀವನ ನಡೆಸುವ ಕೃಷಿಕನ ಸ್ಥಿತಿ ಹೇಳತೀರದಾಗಿದೆ. ಈ ಹಿಂದಿನ ಸಮಯಗಳಲ್ಲಿ ಅಡಿಕೆ ಮರಗಳಿಗೆ ಕೊಳೆರೋಗ, ಹಳದಿ ಎಲೆ ರೋಗ ಭಾದಿಸುತಿತ್ತು ಆದರೆ ಪ್ರಸ್ತುತವಾಗಿ ಎಲೆ ಚುಕ್ಕಿ ರೋಗ ಆರಂಭವಾಗಿದ್ದು ಅಡಿಕೆ ಬೆಳೆಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹುಳುಗಳು ಅಡಿಕೆಯ ಸೋಗೆಗೆ ಹತ್ತಿ ತಿನ್ನುತ್ತಾ ಬರುತ್ತಿವೆ, ನಂತರ ಸುಳಿಯನ್ನು ತಿಂದಮೇಲೆ ಅಡಿಕೆ ಮರವೇ ಸತ್ತು ಹೋಗುತ್ತದೆ ಎಂದು ರೈತರು ತಿಳಿಸಿದ್ದಾರೆ. ಈ ಹಿಂದಿನ ದಿನಗಳಲ್ಲಿ ಕೆರೆಕಟ್ಟೆ, ಶೀರ್ಲು, ಮುಂತಾದ ಭಾಗಗಳಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಅಥವಾ ಕಾಡ್ಗಿಚ್ಚು ಉಂಟಾಗುವುದರಿಂದ ಹುಳುಗಳು ಆ ಬೆಂಕಿಯಲ್ಲಿ ಬಿದ್ದು ಸಾಯುತ್ತಿದ್ದವು ಆದರೆ ಕಳೆದ ಎರಡು ಮೂರು ವರ್ಷಗಳಿಂದ ಕಾಡ್ಗಿಚ್ಚು ಸಂಭವಿಸದೆ ನಿಯಂತ್ರಣಕ್ಕೆ ಬಂದಿರುವುದರಿಂದ ಈ ರೀತಿಯಾದ ರೋಗಗಳು ಭಾದಿಸುತ್ತಿರಬಹುದು ಎಂದು ರೈತರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಾರಿಯ ಅತೀ ಹೆಚ್ಚಿನ ಮಳೆಯಿಂದಾಗಿ ಮತ್ತು ಪ್ರಸ್ತುತ ಮಳೆಯಾಗುತ್ತಿರುವ ಕಾರಣದಿಂದಾಗಿ ಈ ರೋಗ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಕಳಸ ತಾಲೂಕಿನಲ್ಲಿ ಹೆಚ್ಚಾಗಿ ಎಲೆ ಚುಕ್ಕಿ ರೋಗ ಕಂಡು ಬಂದಿತ್ತು ಆದರೆ ಈ ಬಾರಿ ಶೃಂಗೇರಿ,ಆಗುಂಬೆ, ತೀರ್ಥಹಳ್ಳಿ ಕಡೆಗಳಲ್ಲಿ ಈ ರೋಗ ಕಂಡುಬರುತ್ತಿದೆ ಹಾಗೂ ಶೃಂಗೇರಿಯ ಕೆರೆಕಟ್ಟೆ ಭಾಗದಲ್ಲಿ ಅತೀ ಹೆಚ್ಚು ಅಡಿಕೆ ತೋಟಗಳು ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿದೆ ಎಂದು ತಿಳಿದುಬಂದಿದೆ.
ಕೃಷಿಕರಿಗೆ ಈ ಬಾರಿ ಬಹಳಷ್ಟು ಸಂಕಷ್ಟ ಈ ಎಲೆ ಚುಕ್ಕಿ ರೋಗದಿಂದ ಉಂಟಾಗಿದೆ, ಸರ್ಕಾರ ಆದಷ್ಟು ಬೇಗ ಈ ಕುರಿತು ಗಮನ ಹರಿಸಿ ನಷ್ಟದಲ್ಲಿರುವ ರೈತನ ಬಾಳನ್ನು ಹಾಗೂ ಆತನನ್ನು ನಂಬಿದವರ ಜೀವನವನ್ನು ಸರಿಪಡಿಸಿ ಕೊಡಬೇಕೆಂದು ನೆಮ್ಮಾರು ಮತ್ತು ಕೆರೆಕಟ್ಟೆ ಭಾಗದ ರೈತ ಕುಟುಂಬಗಳು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಮನವಿ ಮಾಡಿದ್ದಾರೆ.



0 Comments