ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಹುಲಿ ಉಗುರನ್ನು ಮಾರಾಟ ಮಾಡುತ್ತಿದ್ದ ಓರ್ವನ ಬಂಧನವನ್ನು ಚಿಕ್ಕಮಗಳೂರು ಅರಣ್ಯ ಇಲಾಖೆ ಮಾಡಿದೆ.

ಚಿಕ್ಕಮಗಳೂರು ನಗರದಲ್ಲಿ ಸಕ್ರಿಯವಾಗಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆಯ ಸಂಚಾರಿ ಅರಣ್ಯ ವಲಯ ಅರಣ್ಯ ಅಧಿಕಾರಿಗಳ ತಂಡ ಯಶಸ್ವಿಯಾಗಿ ಪತ್ತೆಮಾಡಿದೆ. 

ಅರಣ್ಯ ಸಂಚಾರಿದಳ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಜಯಸ್ ಮತ್ತು ಅರಣ್ಯಾಧಿಕಾರಿ ವೆಂಕಟೇಶ್ ಅವರ ನೇತೃತ್ವದಲ್ಲಿ ತಂಡದ ಸದಸ್ಯರ ಜೊತೆಗೆ ಈ ಜಾಲವು ಯಶಸ್ವಿಯಾಗಿ ನಿಯಂತ್ರಣಕ್ಕೆ ಸಿಕ್ಕಿದೆ. ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಲ್ಲ ದೊಡ್ಡಿಯ ಇಂದ್ರ ನಗರವಾಸಿ ಶೇಖರ್ ಎಂಬ ವ್ಯಕ್ತಿಯನ್ನು ಹಿರೇಕೊಳಲೆ ರಸ್ತೆಯಲ್ಲಿ ಬಂಧಿಸಿದ ಪೊಲೀಸರು ಎರಡು ಹುಲಿ ಉಗುರು ಹಾಗೂ ಒಂದು ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ. 

ಹುಲಿ ಉಗುರನ್ನು ಮಾರಾಟ ಮಾಡಲು ಹೇಳಿದ್ದ ಹುಕ್ಕುಂದ ಗ್ರಾಮದ ಸುಂದರ ಎಂಬ ವ್ಯಕ್ತಿಯು ತಲೆಮರೆಸಿಕೊಂಡಿದ್ದಾನೆ ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮುಕುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿಗಾಗಿ ಉರುಳು ಹಾಕಿ ಹುಲಿಯನ್ನು ಕೊಂದು ಅದರ ಎರಡು ಉಗುರನ್ನು ಶೇಖರನು ಮಾರಾಟ ಮಾಡಲು ಮುಂದಾಗಿದ್ದ ಎಂಬ ಮಾಹಿತಿಯು ಸಹ ದೊರೆತಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಸುಂದರನು ತಲೆಮರೆಸಿಕೊಂಡಿರುವುದರಿಂದ ಆತನ ಪತ್ತೆಯ ನಂತರ ಮುಂದಿನ ವಿಚಾರಗಳು ಸ್ಪಷ್ಟವಾಗಲಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ನಂದೀಶ್, ದಿನೇಶ್, ಅಶ್ವಥ್ ನಾರಾಯಣ, ವೆಂಕಟೇಶ್, ಅರಣ್ಯ ರಕ್ಷಕ ಹೇಮಂತ್, ಕುಮಾರಸ್ವಾಮಿ, ಜಯಪ್ರಕಾಶ್, ಈಶ್ವರ್, ಮತ್ತು ಸುನೀಲ್ ಇದ್ದರು.