ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಮುಖ್ಯರಸ್ತೆಯಾದ ಎಂ.ಜಿ ರಸ್ತೆಯಲ್ಲಿ ನವೆಂಬರ್ ಒಂದನೇ ತಾರೀಖಿನಿಂದ ವಾಹನ ನಿಲುಗಡೆಗೆ ಶುಲ್ಕ ವಸೂಲಾತಿ ಆರಂಭವಾಗಲಿದೆ ಎಂದು ನಗರಸಭೆ ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಇಷ್ಟು ದಿನಗಳ ಕಾಲ ಚರ್ಚೆಯಲ್ಲಿದ್ದ ಈ ವಿಷಯವು ಇಂದು ಅಂತಿಮವಾಗಿದೆ. ಈ ಹಿಂದೆ ಶಾಸಕ ಸಿ ಟಿ ರವಿ ಅವರು ಸಂಪೂರ್ಣ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವವರೆಗೆ ಯಾವುದೇ ರೀತಿಯ ಶುಲ್ಕ ವಸೂಲಾತಿ ನಡೆಯುವುದಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಏಕಾಏಕಿ ತೆಗೆದು ಕೊಂಡಿರುವ ಈ ನಿರ್ಧಾರಕ್ಕೆ ಸ್ಥಳೀಯ ವ್ಯಾಪಾರಿಗಳು ಹಾಗೂ ಎಂ.ಜಿ ರಸ್ತೆಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆ ತೆಗೆದುಕೊಂಡಿರುವ ಈ ರೀತಿಯಾದ ನಿರ್ಧಾರವು ಸರಿಯಲ್ಲ, ತಜ್ಞರಿಂದ ಈ ಕುರಿತು ಮರು ಪರಿಶೀಲನೆ ನಡೆಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಟೆಂಡರ್ ಪಡೆದುಕೊಂಡ ನಿರ್ಮಲ ಭಾರತೀ ಟ್ರಸ್ಟ್ :

ಹದಿನಾರು ಲಕ್ಷ ರೂಪಾಯಿ ಹಣಕ್ಕೆ ನಿರ್ಮಲ ಭಾರತೀ ಟ್ರಸ್ಟ್ ಎಂ.ಜಿ ರಸ್ತೆಯ ಟೆಂಡರ್ ಪಡೆದುಕೊಂಡಿದೆ ಎಂದು ಪೌರಾಯುಕ್ತ ಬಸವರಾಜ್ ಅವರು ತಿಳಿಸಿದ್ದಾರೆ.  ಪ್ರಸ್ತುತ ಪೊಲೀಸರ ಸಲಹೆ ಸೂಚನೆಗಳ ಮೇರೆಗೆ ಶುಲ್ಕ ವಸೂಲಾತಿಯ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಐಜಿ ರಸ್ತೆ ಹಾಗೂ ಉಳಿದ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಕುರಿತು ಗಮನ ಹರಿಸಲಾಗುವುದು ಎಂಬ ಮಾಹಿತಿಗಳನ್ನು ಅಧಿಕಾರಿಗಳು ನೀಡಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿದ್ದು ಸೂಕ್ಷ್ಮವಾಗಿ ಇನ್ನೊಮ್ಮೆ ಈ ಶುಲ್ಕ ವಸೂಲಾತಿ ಕುರಿತು ಗಮನ ಹರಿಸಬೇಕಿದೆ ಎಂದು  ಸಾರ್ವಜನಿಕರು ಹಾಗೂ ಎಂ.ಜಿ ರಸ್ತೆಯ ಸ್ಥಳೀಯರು ಆಗ್ರಹಿಸಿದ್ದಾರೆ.