ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ರೈತರಿಗೆ ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟ ಆರೋಪ ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಸೊಸೈಟಿಯ ಆಡಳಿತ ಮಂಡಳಿಯ ವತಿಯಿಂದ ಶೃಂಗೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಆರೋಪಕ್ಕೆ ಸ್ಪಷ್ಟೀಕರಣ ನೀಡಲಾಯಿತು. ರೈತರಿಗೆ ಅನ್ಯಾಯವಾದರೆ ನಮಗೂ ಅನ್ಯಾಯ ಆದಂತೆ, ರೈತರಿಗೆ ಮಾರಾಟವಾಗಿರುವ ರಸಗೊಬ್ಬರದ ಗುಣಮಟ್ಟದಲ್ಲಿ ಅನ್ಯಾಯವಾಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಶೃಂಗೇರಿ ತಾಲೂಕಿನ ತೆಕ್ಕೂರು ಸೊಸೈಟಿ ಅಧ್ಯಕ್ಷರಾದ ರಮೇಶ್ ಭಟ್ ಹೇಳಿದರು.

ಲಾಕ್ಡೌನ್ ಸಮಯದಲ್ಲಿ ಇತರೆ ಕಂಪನಿಗಳ ರಸಗೊಬ್ಬರ ಸಿಗದ ಕಾರಣ ಅನಿವಾರ್ಯವಾಗಿ ಕೃಷಿ ಅಮೃತ್ 17:17:17 ಗೊಬ್ಬರ ತರಿಸಲಾಗಿತ್ತು. ಈಗ ಅದರ ಬಗ್ಗೆ ರೈತರಿಂದ ರಸಗೊಬ್ಬರ ಕಳಪೆ ಗುಣಮಟ್ಟದ್ದಾಗಿದೆ ಎಂದು ದೂರು ಬಂದಿದ್ದು, ಸೊಸೈಟಿ ವತಿಯಿಂದ ಖರೀದಿ ಮಾಡಿ ರೈತರಿಗೆ ನೀಡಿರುವುದರಿಂದ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು ಆ ಕಾರಣದಿಂದ ತಕ್ಷಣವೇ ಗೊಬ್ಬರವನ್ನು ಪರೀಕ್ಷೆಗೆ ಕಳಿಸಲಾಗಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಗೊಬ್ಬರ ಕಂಪನಿಯ ಮಾಲೀಕರಿಗೂ ಗಮನಕ್ಕೆ ತರಲಾಗಿದೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ, ರಸಗೊಬ್ಬರ ಕಂಪನಿಯಿಂದ ಕಳಪೆ ಗುಣಮಟ್ಟದ ಗೊಬ್ಬರ ಪೂರೈಕೆಯಾಗಿರುವುದು ಸಾಬೀತಾದಲ್ಲಿ ಕಂಪನಿಯು ರೈತರಿಗಾದ ಸಂಪೂರ್ಣ ನಷ್ಟವನ್ನು ತುಂಬಿಕೊಡಬೇಕು. ಈ ನಿಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ನಷ್ಟ ತುಂಬಿಕೊಡದೇ ಇದ್ದಲ್ಲಿ ಈಗಾಗಲೇ ಕಾನೂನು ಮಾಹಿತಿ ಪಡೆದಿದ್ದು ಕಂಪನಿಯ ವಿರುದ್ಧ ಕಾನೂನು ಹೋರಾಟ ಮಾಡಿಯಾದರೂ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು. ನಮ್ಮದು ಅತ್ಯುತ್ತಮ ಸಹಕಾರ ಸಂಘ ಸೊಸೈಟಿ ಆಗುವಲ್ಲಿ ನನ್ನ 16 ವರ್ಷದ ಪ್ರಮಾಣಿಕ ಶ್ರಮವಿದೆ. ರೈತರು ಹಾಗೂ ಷೇರುದಾರರ ಸಹಕಾರದಿಂದ ಇದು ಸಾಧ್ಯವಾಗಿದೆ. ಹಾಗಾಗಿ ರೈತರ ಹಾಗೂ ಸಂಘದ ಪರವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಗೊಬ್ಬರ ಹಾಗೂ ಗುಣಮಟ್ಟದ ಕುರಿತು ಸರ್ಕಾರವೇ ಒಂದು ನಿಯಮ ರೂಪಿಸಬೇಕು, ಆಗ ಹೊಸ ಕಂಪನಿಗಳಿಂದ ಇಂತಹ ತೊಂದರೆ ಆಗದಂತೆ ತಡೆಯಬಹುದು. ಮುಂದಿನ ದಿನಗಳಲ್ಲಿ ಪರೀಕ್ಷೆ ಮಾಡಿಸಿದ ನಂತರವೇ ಹೊಸ ಕಂಪನಿಯ ಗೊಬ್ಬರ ತರಿಸುತ್ತೇವೆ ಎಂದರು.


ರೈತರ ಸಂಕಷ್ಟಗಳ ಜೊತೆ ಸದಾ ನಾವಿದ್ದೇವೆ, ಪ್ರಯೋಗಾಲಯದ ಇನ್ನೊಂದು ವರದಿ ಬಂದ ನಂತರ ಅದನ್ನು ಪರಿಶೀಲಿಸಿ ಕಂಪನಿಯು ಕಳಪೆ ಗುಣಮಟ್ಟದ ಗೊಬ್ಬರವನ್ನು ನೀಡಿದಲ್ಲಿ ಕಾನೂನಿನ ಅಡಿಯಲ್ಲಿ ಕಂಪನಿಯ ಮೇಲೆ ಸೂಕ್ತ ಕ್ರಮಗಳನ್ನು ಜಾರುಗಿಸಲಾಗುವುದು. - ಡಿ.ಬಿ ರಾಜೇಂದ್ರ ಹೆಗ್ಗಾರುಕುಡಿಗೆ ಸಹಕಾರ ಸಂಘದ ಅಧ್ಯಕ್ಷ. 

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ರಮೇಶ್ ಭಟ್, ಉಪಾಧ್ಯಕ್ಷ ಸತೀಶ್, ಪಿಎಸಿಎಸ್ ಸಿಇಓ ಶಂಕರೇಗೌಡ, ನಿರ್ದೇಶಕರಾದ ಶಕುಂತಲಾ ಅಶೋಕ್, ಸುಬ್ಬಣ್ಣ ತೆಕ್ಕೂರು, ವೆಂಕಟೇಶ್, ಕೃಷ್ಣಮೂರ್ತಿ, ಕಲ್ಕುಳ್ಳಿ ನೂತನ್ ಹೆಗ್ಡೆ ಹಾಗೂ ಇತರೆ ಸದಸ್ಯರು ಇದ್ದರು.