ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಪರ್ವತ ಶ್ರೇಣಿಗಳ ಮಧ್ಯದಲ್ಲಿರುವ ದತ್ತಾತ್ರೇಯ ಪೀಠಕ್ಕೆ ಡಿಸೆಂಬರ್ ತಿಂಗಳಿನಲ್ಲಿ ದತ್ತಮಾಲಾ ಅಭಿಯಾನದ ಸಮಯದಲ್ಲಿ ಮಾಲೆ ಧರಿಸಿ ರಾಜ್ಯದ ಹಾಗೂ ದೇಶದ ಹಲವೆಡೆಗಳಿಂದ ದತ್ತ ಭಕ್ತರು  ಆಗಮಿಸುವ ನಿಟ್ಟಿನಲ್ಲಿ ಇಂದು ಕಾರ್ಯಕ್ರಮದ ಕುರಿತಾದ ಮಾಹಿತಿಯನ್ನು ಬಜರಂಗದಳದ ಪ್ರಮುಖರು ನೀಡಿದರು.  

ಶ್ರೀ ಪ್ಲವನಾಮ ಸಂವತ್ಸರದ ಮಾರ್ಗಶಿರ ಶುದ್ಧ ಸ್ಕಂದ ಪಂಚಮಿಯ 8 ಡಿಸೆಂಬರ್ 2021 ರಿಂದ ಮಾರ್ಗಶಿರ ಹುಣ್ಣಿಮೆ  19 ಡಿಸೆಂಬರ್ 2021ರ ವರೆಗೆ ನಡೆಯಲಿರುವ ದತ್ತಜಯಂತಿ ಉತ್ಸವದ ಪ್ರಯುಕ್ತ ದತ್ತಪೀಠದಲ್ಲಿ ಧಾರ್ಮಿಕ ವಿಧಿವಿಧಾನಗಳು ಹೋಮ ಪೂಜೆ ಪ್ರಸಾದ ವಿತರಣಾ ಕಾರ್ಯಕ್ರಮ ಹಾಗೂ ಚಿಕ್ಕಮಗಳೂರು ನಗರದಲ್ಲಿ ಸರ್ಕಾರದ ಕೋವಿಡ್ -19 ನಿಯಮಗಳನ್ನು ಪಾಲಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಬಜರಂಗದಳದ ಪ್ರಾಂತ ಸಹ ಸಂಯೋಜಕರಾದ ರಘು ಸಕಲೇಶಪುರ ತಿಳಿಸಿದರು.

ಅನುಸೂಯ ಪೂಜಾ ಕಾರ್ಯಕ್ರಮವು ದಿನಾಂಕ ಡಿಸೆಂಬರ್ 17 ರಂದು ನಡೆಯಲಿದೆ, ಆ ದಿನ  ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ 09.30 ಕ್ಕೆ ಮಹಿಳೆಯರಿಂದ ಶ್ರೀ ಬೋಳರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಸಂಕಿರ್ತಾನ ಯಾತ್ರೆ ನಡೆಯಲಿದೆ, ನಂತರದಲ್ಲಿ ಮಹಿಳಾ ಭಕ್ತಾದಿಗಳು ದತ್ತಪೀಠಕ್ಕೆ ತೆರಳಿ ದರ್ಶನ ಪಡೆದು ಹಿದಿರುಗಲಿದ್ದಾರೆ ಎಂದರು. ಅಲ್ಲಿ ಮಹಿಳೆಯರಿಗೆ ಹಿಂದೂ ಸಂಪ್ರದಾಯದಂತೆ ಬಳೆ, ಅರಿಶಿನ, ಕುಂಕುಮವನ್ನು ನೀಡಲಾಗುವುದು. ದತ್ತಹೋಮ, ಗಣಪತಿ ಹೋಮ ನೆರವೇರಿಸಿ ಅನಸೂಯಾ ದೇವಿ ಮತ್ತು ದತ್ತಪಾದುಕೆಯ ದರ್ಶನವನ್ನು ಹೆಂಗಸರು ಮಾಡಲಿದ್ದಾರೆ ಎಂದರು.  ಈ ಕಾರ್ಯಕ್ರಮದಲ್ಲಿ ವಿಹಿಂಪ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ದೇಸ್ ಮನೆ  ಆಗಮಿಸಲಿದ್ದಾರೆ ಎಂದರು.

ದತ್ತ ಸಂಕೀರ್ತನ ಯಾತ್ರೆ ಹಾಗೂ ಶೋಭಾಯಾತ್ರೆ :

ದಿನಾಂಕ 18.12.2021 ರಂದು ಮಧ್ಯಾಹ್ನ 2.00 ಗಂಟೆಯಿಂದ ರತ್ನಗಿರಿ ರಸ್ತೆಯಲ್ಲಿರುವ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಿಂದ ಸಂಕಿರ್ತಾನಯಾತ್ರೆ, ನಾದಸ್ವರದೊಂದಿಗೆ ವಿಶೇಷ ಪೂಜೆ, ವಿಧಿ ವಿಧಾನದೊಂದಿಗೆ ವಿಹಿಂಪ ನ ಹಿರಿಯರು ಚಾಲನೆ ನೀಡಲಿದ್ದಾರೆ ಎಂದರು. ನಂತರ ನಡೆಯುವ ಶೋಭಾಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಶೋಭಾ ಯಾತ್ರೆಯು  ಬಸವನಹಳ್ಳಿ ಮುಖ್ಯ ರಸ್ತೆಯಿಂದ ಪ್ರಾರಂಭವಾಗಿ ಹನುಮಂತಪ್ಪ ಸರ್ಕಲ್, ಎಂ.ಜಿ ರಸ್ತೆ ಮೂಲಕ ಆಜಾದ್ ವೃತ್ತದಲ್ಲಿ ಮಹಾ ಆರತಿ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ದಿನಾಂಕ 19.12.2021 ರಂದು ದತ್ತಜಯಂತಿಯ ಅಂಗವಾಗಿ ಸುಮಾರು 5.000 ಕ್ಕೂ ಅಧಿಕ ದತ್ತಭಕ್ತರು ದತ್ತ ಪೀಠದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ, ಈ ಸಂದರ್ಭದಲ್ಲಿ ದತ್ತಮಾಲಾ ಧಾರಣೆ ಮಾಡಿದ ಭಕ್ತಾದಿಗಳು ಕೂಡ ಆಗಮಿಸಲಿದ್ದು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ, ಕಾಲ್ನಡಿಗೆಯಲ್ಲಿ ಭಜನೆ, ಸಂಕೀರ್ತನೆಯೊಂದಿಗೆ ದತ್ತಪೀಠ ತಲುಪಿ ಗುಹಾಂತರ ದೇವಾಲಯದಲ್ಲಿರುವ ದತ್ತಪಾದುಕೆಗಳ ದರ್ಶನ ಪಡೆದು ಅಲ್ಲಿ ನಡೆಯುವ ಗಣಪತಿ ಹೋಮ ದತ್ತಹೋಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ವಿಶೇಷವಾಗಿ ಹಿಂದೂ ಅರ್ಚಕರ ನೇಮಕಕ್ಕಾಗಿ ರಾಜ್ಯದ ಪ್ರತಿ ಪ್ರಖಂಡಗಳಲ್ಲಿ ವಿಶೇಷ ಸಂಕಲ್ಪ ಕಾರ್ಯಕ್ರಮ ಹಾಗೂ ಸ್ಥಳೀಯ ದೇವಸ್ಥಾನಗಳಲ್ಲಿ ಹೋಮ ಹವನಗಳು ನೆರವೇರಲಿದೆ ಎಂಬ ಮಾಹಿತಿ ನೀಡಿದರು.