ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕನ್ನಡದ ಶ್ರೇಷ್ಠ ನಟ, ಜನಪರ ಕಾಳಜಿ ಹೊಂದಿದ್ದ ಕೊಡುಗೈ ದಾನಿ ಪುನೀತ್ ರಾಜಕುಮಾರ್ ಅವರು ನಿಧನ ಹೊಂದಿ ಕೆಲವು ದಿನಗಳಷ್ಟೇ ಕಳೆದಿದೆ. ಅವರ ಸೇವೆಯನ್ನು, ಬದುಕಿನ ಆದರ್ಶವನ್ನು ಸದಾ ಕಾಲ ನೆನಪಿನಲ್ಲಿ ಉಳಿಸಿಕೊಳ್ಳುವ ಸಲುವಾಗಿ ಪುನೀತ್ ರಾಜಕುಮಾರ್ ಸಂಸ್ಮರಣಾ ಎಂಬ ನೂತನ ಸಮಿತಿ ಶೃಂಗೇರಿಯು ಅಪ್ಪು ಸೇವಾ ನಮನ ಎಂಬ ವಿಶಿಷ್ಟ ಸೇವಾ ಕಾರ್ಯವನ್ನು ಆಯೋಜನೆ ಮಾಡಿದೆ.

ದಿನಾಂಕ 16.11.2021 ರ ಮಂಗಳವಾರದಂದು ಶೃಂಗೇರಿಯ ಕಾಂಚೀನಗರ ಶಾಲೆಯ ಆವರಣದಲ್ಲಿ ಅಪ್ಪು ಸೇವಾ ನಮನ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೃಂಗೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಹರೀಶ್ ವಿ ಶೆಟ್ಟಿ, ಗೌರವಾಧ್ಯಕ್ಷರಾಗಿ ಶ್ರೀಮತಿ ಶೈಲಜಾ ರತ್ನಾಕರ್ ಹೆಗ್ಡೆ, ಹಾಗೂ ಖಜಾಂಚಿಯಾಗಿ ನಾಗೇಶ್ ಕಾಮತ್ ಕಾರ್ಯ ನಿರ್ವಹಿಸಲಿದ್ದಾರೆ. 

ನಾಡಿನ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಅಗಲುವಿಕೆ ಯು ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸೇವೆಗಳು ಜನಮನದಲ್ಲಿ ಸದಾ ನೆಲೆಸಿರುತ್ತದೆ ಹಾಗೂ ಮುಂದೆಯೂ ಕೂಡ ಅವರ ಸೇವೆಯನ್ನು ನೆನೆಯುವ ಸ್ಮರಣಾರ್ಥವಾಗಿ ಅಪ್ಪು ಸೇವಾ ನಮನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹರೀಶ್ ಶೆಟ್ಟಿ ತಿಳಿಸಿದರು. ಪುಷ್ಪ ನುಡಿ ಹಾಗೂ ಸಂಗೀತದಿಂದ ಅಗಲಿದ ದಿವ್ಯ ಚೇತನ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗುವುದು, ಹಾಗೂ ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವಾ ಸಾಧನೆ ಮಾಡಿದ ಸ್ಥಳೀಯರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು. 

ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನವನ್ನು ಸಲ್ಲಿಸಲು ಕಗ್ಗ ಖ್ಯಾತಿಯ ಕಾಸರವಳ್ಳಿ ನಟೇಶ್ ಅವರು ನುಡಿನಮನ ಸಲ್ಲಿಸಲಿದ್ದಾರೆ ಎಂದು ಕಾರ್ಯಕ್ರಮದ ಕುರಿತಾಗಿ ಅಧ್ಯಕ್ಷ  ಹರೀಶ್ ವಿ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಈ ಕಾರ್ಯಕ್ರಮದೊಂದಿಗೆ ಮಧ್ಯಾಹ್ನ 3:00 ಗಂಟೆಗೆ ಶೃಂಗೇರಿಯ ಪುರದ್ವಾರದಿಂದ ಅಪ್ಪು ಅವರ ಪ್ರತಿಮೆಯೊಂದಿಗೆ ಬೈಕ್ ಜಾಥಾ ಆಯೋಜನೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಜರಿರಲಿದ್ದಾರೆ ಎಂದು ಅಧ್ಯಕ್ಷರು ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು.