ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಒಂದು ದಿನದ ಮಟ್ಟಿಗೆ ಮೀನು ಹಾಗೂ ಮಾಂಸದ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಬೇಕೆಂದು ಚಿಕ್ಕಮಗಳೂರು ನಗರಸಭೆಯು ವ್ಯಾಪಾರಸ್ಥರಿಗೆ ಆದೇಶಿಸಿದೆ.
ಸರ್ಕಾರದ ಸುತ್ತೋಲೆಯಂತೆ ನ.25 ರಂದು ಸಂತ ಶ್ರೀ ಟಿ.ಎಲ್ ವಾಸ್ವಾನಿ ಅವರ ಜನ್ಮದಿನದ ಅಂಗವಾಗಿ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಮೀನು,ಕುರಿ, ಕೋಳಿ ಮಾಂಸವನ್ನು ಹಾಗೂ ಪ್ರಾಣಿ ವಧೆಯನ್ನು ಮಾಡದಂತೆ ನಗರಸಭೆಯು ಪ್ರಕಟಣೆ ಹೊರಡಿಸಿದೆ ಹಾಗೂ ಅಂದು ಯಾವುದೇ ರೀತಿಯ ಮೀನು, ಕೋಳಿ,ಕುರಿ ಹಾಗೂ ಇನ್ನಿತರ ಮಾಂಸಾಹಾರಿ ಹೋಟೆಲ್ ಗಳನ್ನು ಒಂದು ದಿನದ ಮಟ್ಟಿಗೆ ಸಂಪೂರ್ಣವಾಗಿ ಮುಚ್ಚಬೇಕೆಂದು ತಿಳಿಸಿದೆ.
ಮಾಂಸದ ವ್ಯಾಪಾರ ನಡೆಸುವ ಎಲ್ಲಾ ವ್ಯಾಪಾರಿಗಳಿಗೂ ಹಾಗೂ ಮಾಂಸಾಹಾರಿ ಹೋಟೆಲ್ ಗಳ ವ್ಯಾಪಾರಸ್ಥರಿಗೆ ಈ ಕಾನೂನು ಅನ್ವಯವಾಗುತ್ತದೆ. ಈ ದಿನದಂದು ಯಾರಾದರೂ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲಿ ಕಾನೂನಿನ ಅಡಿಯಲ್ಲಿ ಸೂಕ್ತವಾದ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಚಿಕ್ಕಮಗಳೂರಿನ ನಗರಸಭೆಯ ಪೌರಾಯುಕ್ತರಾದ ಬಿ.ಸಿ ಬಸವರಾಜ್ ಮಾಹಿತಿ ನೀಡಿದರು. ಈ ಕುರಿತು ಹೆಚ್ಚಿನ ನಿಗಾ ವಹಿಸಲು ಸೂಪರ್ವೈಸರ್ ಗಳ ನೇಮಕ ಮಾಡಲಾಗಿದ್ದು ಅವರು ಕೂಡ ಈ ಕುರಿತಾಗಿ ಹೆಚ್ಚಿನ ಗಮನವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

0 Comments