ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗಗಳಲ್ಲಿ ಈ ಹಿಂದೆ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಜಯಪುರ ಪೊಲೀಸರು ಬಂಧಿಸಿದ್ದಾರೆ.
ಹಗಲು ವೇಳೆಯಲ್ಲಿ ಬೀಗ ಹಾಕಿದ ಮನೆಗಳನ್ನು ದೋಚುವುದು ಈ ಕಳ್ಳರ ಕೃತ್ಯವಾಗಿತ್ತು. ಬಂಧಿತರಿಬ್ಬರೂ ಅಗಳಗಂಡಿ ಗ್ರಾಮಪಂಚಾಯತಿ ವ್ಯಾಪ್ತಿಯವರು ಎಂದು ತಿಳಿದುಬಂದಿದೆ. ಓರ್ವ ಕಚಿಗೆ ಗ್ರಾಮದ ಮುಸ್ತಫ (24) ಬಿನ್ ಮೊಹಿದ್ದಿ, ಇನ್ನೋರ್ವ ಅಗಳಗಂಡಿಯ ಆಕಾಶ್ (24) ಬಿನ್ ಲೇಟ್ ಕೃಷ್ಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರೂ ಕಳ್ಳರಿಗೆ ಕುಡಿತದ ಚಟವಿದ್ದು ಹಣಕ್ಕಾಗಿ ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
2019 ರ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಸೇರಿಕೊಂಡು ಕಚಿಗೆ ಗ್ರಾಮದ ಶಂಕರ ಪೂಜಾರಿ ಮತ್ತು ಕೊಂಬಟ್ಟಿ ಗ್ರಾಮದ ಶ್ರೀಧರ್ ಎಂಬುವವರ ಮನೆಗಳನ್ನು ದೋಚಿರುವುದು ತನಿಖೆಯ ವೇಳೆಯಲ್ಲಿ ತಿಳಿದುಬಂದಿದೆ. ಅಲ್ಲದೇ ಅಗಳಗಂಡಿಯ ಮಾರಿಕಾಂಬಾ ದೇವಸ್ಥಾನದ ಹುಂಡಿ ಒಡೆದು ಹಣ ದೋಚಲು ವಿಫಲ ಯತ್ನ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಕುರಿತಾಗಿ ಜಯಪುರ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಕೊಪ್ಪ ಸಿ. ಪಿ. ಐ ಗುರಣ್ಣ ಹೆಬ್ಬಾಳ್ ಅವರು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದರು. ಅನುಮಾನದ ಮೇರೆಗೆ ಆರೋಪಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾಗ ಬಂಧಿತರಿಬ್ಬರು ತಾವೇ ಈ ಮನೆಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 4 ಲಕ್ಷ ರೂ ಬೆಲೆಬಾಳುವ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನದಲ್ಲಿರಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಎಂ.ಎಚ್, ಹಾಗೂ ಹೆಚ್ಚುವರಿ ಎಸ್.ಪಿ ಕುಮಾರಿ ಶೃತಿ, ಎ.ಎಸ್.ಪಿ ಗುಂಜನ್ ಆರ್ಯ ಐ. ಪಿ. ಎಸ್. ಗುರಣ್ಣ ಹೆಬ್ಬಾಳ್ ಸಿ. ಪಿ. ಐ, ಜಯಪುರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರಾದ ಜ್ಯೋತಿ ಪಿಎಸ್ಐ, ಲಿಂಗೇಗೌಡ ಎ ಎಸ್. ಐ ಮತ್ತು ಸತೀಶ, ಗಿರೀಶ್, ರಘು, ಧರ್ಮರಾಜ್, ರಾಜಯ್ಯ, ವೀರಭದ್ರಪ್ಪ, ಭಾಸ್ಕರ್ ರವರು ಪ್ರಕರಣ ಭೇದಿಸುವಲ್ಲಿ ಸಹಕರಿಸಿರುತ್ತಾರೆ ಎಂದು ತಿಳಿದುಬಂದಿದೆ.

0 Comments