ಶಾಲೆಯ ಮುಖ ಕಾಣಲು ಹತ್ತಾರು ಕಿಲೋಮೀಟರ್ ನಡೆಯಬೇಕಾದ ಕಾಲದಲ್ಲಿ ಕಾನೂನು ಪದವಿ ಓದುವುದು ಎಂದರೆ ಕೆಲವರು ಹೊಲ ಮಾರಿ ಲಂಚ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಿಕೊಂಡಷ್ಟು ಸುಲಭವಾಗಿರಲಿಲ್ಲ ಮಲೆನಾಡಿನ ಇಪ್ಪತ್ತು ವರ್ಷಗಳ ಹಿಂದಿನ ಕಾಲದ ಕಾಲಘಟ್ಟ.
ಅಂತಹ ಸಂಧರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರಿನ ಕುಗ್ರಾಮವಾದ ಬುಕಡಿಬೈಲಿನಲ್ಲಿ ಹುಟ್ಟಿದ್ದ ಹುಡುಗನೊಬ್ಬ ಪದವಿ ಪಾಸ್ ಆಗಿ ಕಾನೂನು ಪದವಿ ಗಿಟ್ಟಿಸಿಕೊಂಡಿದ್ದು ನಾನು ಮೊದಲೇ ಹೇಳಿದಂತೆ ಅಷ್ಟು ಸುಲಭದ ವಿಷಯವೇನೂ ಆಗಿರಲಿಲ್ಲ.
ಒಂದು ಹಳ್ಳಿಯಿಂದ ಬಂದು ಕಾನೂನು ಅಧ್ಯಯನ ಮಾಡಬೇಕೆಂಬ ಆಸೆ ಆತನಲ್ಲಿ ಹುಟ್ಟಿತೆಂದರೆ ಸಾಮಾನ್ಯವಾಗಿ ಜನರ ನೋವಿಗೆ ಧ್ವನಿಯಾಗುವ, ಅನ್ಯಾಯದ ವಿರುದ್ಧ ಹೋರಾಡುವ ಉದ್ಧೇಶ ಆತನದ್ದಾಗಿರುತ್ತದೆ.
ಆದರೆ ಹಾಗೆ ಧ್ಯೇಯವನ್ನಿಟ್ಟುಕೊಂಡು ಓದಿದ ಓರ್ವ ವ್ಯಕ್ತಿ ಮುಂದೆ ಆ ಕಾನೂನಿನ ಮೇಲೆ ನಯಾಪೈಸೆಯ ನಂಬಿಕೆ ಇಲ್ಲದೆ ಶಸ್ತ್ರ ಹಿಡಿದು ಸೆಟೆದು ನಿಲ್ಲುತ್ತಾನೆ ಎಂದರೆ ನಮ್ಮ ಒಟ್ಟಾರೆ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕೆನಿಸುತ್ತದೆ.
ಹತ್ತೊಂಬತ್ತನೆಯ ಹಾಗೂ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಮಲೆನಾಡಿನ ಶೃಂಗೇರಿ, ಕೊಪ್ಪ, ಕಳಸ, ಮೂಡಿಗೆರೆ ಭಾಗದ ಹಳ್ಳಿಗಾಡಿನ ಜನರ ಬದುಕಿನ ಪರಿಸ್ಥಿತಿಯನ್ನು ನೆನೆದಾಗ ಯಾರಿಗಾದರೂ ಅಯ್ಯೋ ಎನಿಸದೆ ಇರದು. ಆಸ್ಪತ್ರೆ, ರಸ್ತೆ, ಕುಡಿಯುವ ನೀರು, ಉದ್ಯೋಗ, ಉತ್ತಮ ವೇತನ ಯಾವುದೂ ಇಲ್ಲದ ಕಾಡು ಜನಗಳ ಪಾಡಾಗಿತ್ತು ಇಲ್ಲಿಯವರ ಬದುಕು. ಇನ್ನು ಚುನಾವಣೆ ಎಂದರೆ ದೊಡ್ಡವರು ನಡೆಸುವ ಪ್ರತಿಷ್ಠೆಯ ಜೂಜಾಗಿತ್ತು. ಹಣ, ಹೆಂಡದಿಂದ ಅವಿದ್ಯಾವಂತರ ಓಟು ಕೊಂಡುಕೊಂಡು ಹೋದವರು ಮತ್ತೆ ಕಾಣುವುದು ಐದು ವರ್ಷದ ನಂತರವೇ ಆಗಿತ್ತು. ಗೂಟದ ಕಾರಿನ ಸೈರನ್ ಕೇಳೋಣ ಎಂದರೆ ರಸ್ತೆಗಳೂ ಇಲ್ಲದ ಹಳ್ಳಿಯ ಬದುಕು. ಇಂದು ಸಹ ಬಹಳ ಬದಲಾವಣೆಯೇನು ಕಾಣದಿದ್ದರೂ ಸ್ವಲ್ಪ ಮಟ್ಟಿಗಾದರೂ ವ್ಯವಸ್ಥೆಯಲ್ಲಿ ಬದಲಾವಣೆ ಕಂಡಿದೆ.
ಈ ಪೀಕಲಾಟದ ಬದುಕಿನ ನಡುವೆ ಹಣೆಬರಹವನ್ನು ಹೊಣೆಯಾಗಿಸಿ ಇದ್ದುದರಲ್ಲೇ ನೆಮ್ಮದಿಯ ಬದುಕು ನಡೆಸುತ್ತಿದ್ದ ಅಂದಿನ ಜನರಿನ ಸಿಡಿಲು ಬಡಿದಿದ್ದೇ ಸರ್ಕಾರಗಳು ಜಾರಿಗೊಳಿಸಿದ ಅವೈಜ್ಞಾನಿಕ ಅರಣ್ಯ ಕಾಯ್ದೆಗಳಿಂದ ಹಾಗೂ ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳಿಂದ.
2002ರಲ್ಲಿ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾಗಿ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ಪ್ರಾರಂಭವಾಯಿತು, ಆಗ ನಮ್ಮ ನೆಲವನ್ನು ಕಿತ್ತುಕೊಳ್ಳಬೇಡಿ, ಬದುಕಲು ಬಿಡಿ ಎಂದು ಪ್ರಾರಂಭವಾದ ಹೋರಾಟ ಆಡಳಿತ ವ್ಯವಸ್ಥೆಯ ದರ್ಪ, ದೌರ್ಜನ್ಯ, ಕಿರುಕುಳದಿಂದಾಗಿ ಮುಂದೆ ಬಂದು ಹೋರಾಟಗಾರರು ನಕ್ಸಲ್ ಪಡೆಯ ಸಂಪರ್ಕ ಬೆಳೆಸಿದರು. ಮುಂದಿನ ದಿನಗಳಲ್ಲಿ ಅದು ಸರ್ಕಾರಿ ವ್ಯವಸ್ಥೆ ಹಾಗೂ ಬುಡಕಟ್ಟು ಜನರು ಮತ್ತು ಮೂಲ ನಿವಾಸಿಗಳ ನಡುವೆ ಸಂಘರ್ಷದ ಹೋರಾಟವಾಗಿ ಮುಂದೆ ಹೋಯಿತು.
ನಿಮ್ಮ ಬದುಕೇ ನಾಶವಾಗುವಾಗ ಜೀವಕ್ಕೇಕೆ ಹೆದರಬೇಕು ಎಂದು ಹೋರಾಟಗಾರರಿಗೆ ಹೇಳಿ ತುಪಾಕಿ ಕೈಗಿಟ್ಟು ಸಂಘರ್ಷದ ಹಾದಿಯಲ್ಲಿ ನ್ಯಾಯ ದೊರಕಿಸುವ ಭರವಸೆಯೊಂದಿಗೆ ಕಾಡಿಗೆ ಕಳಿಸಲಾಯಿತು.
ಹಳ್ಳಿಗಳಲ್ಲಿ ಹೋರಾಟದ ಕಿಚ್ಚು ವ್ಯಾಪಕವಾಗಿ ಹಬ್ಬಿತ್ತು, ಈ ಹೋರಾಟಕ್ಕೆ ಮಹಿಳೆಯರು ಸಹ ಧುಮ್ಮಿಕ್ಕಿದ್ದರು. ಮದುವೆ ಮಕ್ಕಳು ಸಂಸಾರ ಎಂದು ನೆಮ್ಮದಿ ಜೀವನ ಮಾಡುವ ಬದಲು ನಿನಗ್ಯಾಕೆ ಈ ಕಾಡಿನ ನರಕದ ಬದುಕು ಎಂದು ಕೇಳಿದಾಗ, ಊರಲ್ಲಿದ್ದರೆ ನಾನು ನನ್ನ ಮನೆಗೆ, ತಂದೆ ತಾಯಿಗೆ ಮಾತ್ರ ನೆರವಾಗುತ್ತೇನೆ ಆದರೆ ಈ ಹೋರಾಟದಿಂದಾಗಿ ಹಲವು ತಾಯಂದಿರಿಗೆ ನೆರವಾಗುತ್ತೇನೆ ಎನ್ನುತ್ತಿದ್ದರು. ನೆಲ ಉಳಿಸಿಕೊಳ್ಳುವ ಹೋರಾಟದ ಕಾವು ತಣ್ಣನೆಯ ಮಲೆನಾಡಿನ ವಾತಾವರಣದ ಒಳಗೆ ಎಷ್ಟರಮಟ್ಟಿಗೆ ಹಬ್ಬಿತ್ತು ಎನ್ನುವುದಕ್ಕೆ ಈ ಮಾತುಗಳು ಸಾಕ್ಷಿಯಾಗಿತ್ತು.
ಶಸ್ತ್ರಾಸ್ತ್ರ ಹಿಡಿದುಕೊಂಡು ಸಂವಿಧಾನ ವಿರೋಧಿಯಾಗಿ ಹೋರಾಡುವ ಬದಲು ಮುಖ್ಯ ವಾಹಿನಿಯಲ್ಲಿ ಹೋರಾಡಬಹುದಲ್ಲವೇ ಎಂದಾಗ, ಆಡಳಿತ ವ್ಯವಸ್ಥೆಯ ದೌರ್ಜನ್ಯ, ಪೊಲೀಸರ ಬೂಟು ಕಾಲಿನ ಏಟು ತಮ್ಮ ಆತ್ಮಾಭಿಮಾನವನ್ನು ಜೊತೆಗೆ ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ಕಿತ್ತುಕೊಂಡಿದ್ದರ ಬಗೆಗೆ ಆಕ್ರೋಶ ಹೊರಹಾಕುತ್ತಿದ್ದರು. ಈ ವ್ಯವಸ್ಥೆಯನ್ನು ಕಿತ್ತೊಗೆದು ಪ್ರಜಾ ಸರ್ಕಾರ ಸ್ಥಾಪಿಸುತ್ತೇವೆ, ಸರ್ವರಿಗೂ ಸಮ ಬಾಳಿನ ಸಿದ್ಧಾಂತ ಜಾರಿಗೆ ತರುತ್ತೇವೆ ಎನ್ನುತ್ತಿದ್ದರು.
ಮೊದಲಿಗೆ ಮಲೆನಾಡಿನಲ್ಲಿ 2002ರಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಗೊತ್ತಾಗಿದ್ದು. ಮೊದಲಿಗೆ ವೈವಿಧ್ಯಮಯ ತಾಣವಾಗಿದ್ದ ಚಿಕ್ಕಮಗಳೂರು ಹೊರ ಜಗತ್ತಿಗೆ ವಿವಾದದ ಗೂಡಾಗಿ ಮಾರ್ಪಾಡಾಯಿತು, ತುಪಾಕಿ ಸದ್ಧು ಆಳುವವರ, ಅಧಿಕಾರಿಗಳ ನಿದ್ದೆಗೆಡಿಸಿತ್ತು
ಬಂದೂಕು ಹಿಡಿದು ಮಲೆನಾಡಿನ ನೆಮ್ಮದಿ ಕಿತ್ತುಕೊಂಡ ನಕ್ಸಲರು ಸಾಕಷ್ಟು ಜನರ ರಕ್ತ ಚೆಲ್ಲಿದರು, ಕ್ರಾಂತಿ ಹೆಸರಿನಲ್ಲಿ ಪ್ರಾರಂಭವಾದ ಹೋರಾಟ ಇವರಿಗೆ ಇದೆಂತಹ ಭ್ರಾಂತು ಎಂಬ ಅಭಿಪ್ರಾಯಕ್ಕೆ ಬಂದು ನಿಂತಿತು. ಆದರೆ ನಕ್ಸಲರ ಮೇಲಿನ ಭಯ ಸಾಮಾನ್ಯರನ್ನು ಮೌನವಾಗಿಸಿತ್ತು. ಬಂದೂಕು ಹಿಡಿದು ಕಾಡು ಸೇರಿದ ಬಹುತೇಕರಿಗೆ ಮತ್ತೆ ನಾಡು ಸೇರುವ ಆಸೆ ಇತ್ತಾದರೂ ಕಾಲ ಚಕ್ರ ಸಂಕೋಲೆಗಳ ಒಳಗೆ ಬಂಧಿಯಾಗಿಸಿ ಕಾಡು, ಬಂದೂಕು, ರಕ್ತ, ಇದುವೇ ಬದುಕಿನ ವ್ಯಾಪ್ತಿಯಾಗಿ ಬಿಟ್ಟಿತು. ಬದುಕು ಕಳೆದುಕೊಳ್ಳುವ ಭೀತಿಯಲ್ಲಿ ನಡೆದ ಹೋರಾಟವು ಬಂದೂಕು ಹಿಡಿದು ನಿಂತಾಗ ಸರ್ಕಾರ ಖಾಕಿ ಪಡೆಯ ಬಲದಿಂದ ಹೊಸಕಿ ಹಾಕುವ ಪ್ರಯತ್ನ ಮಾಡಿತು. ಅದಕ್ಕಾಗಿಯೇ ನಕ್ಸಲ್ ನಿಗ್ರಹ ದಳವನ್ನು ಸ್ಥಾಪಿಸಿತು.
ಮೊದಲಿಗೆ ಹಳ್ಳಿಗಳಲ್ಲಿ ನಕ್ಸಲ್ ಚಳುವಳಿ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು, ಆದರೆ ಆ ನಂತರ ನಾಗರೀಕರ ಅಮಾನವೀಯ ಹತ್ಯೆ, ಮತ್ತು ಪೊಲೀಸರ ತನಿಖೆಯ ಭಯದಿಂದಾಗಿ ಬೆಂಬಲ ಕೊಡುವುದು ನಿಲ್ಲಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ಪ್ರಾಜೆಕ್ಟ್ ಘೋಷಣೆ ಮಾಡಲಾಯಿತು, ಆದರೆ ಅದರಲ್ಲೂ ಭ್ರಷ್ಟಾಚಾರ ನಿಲ್ಲಲಿಲ್ಲ. ಘೋಷಣೆ ಮೃಷ್ಟಾನ್ನ ಭೋಜನ್ನದಾದರೂ ಜನರಿಗೆ ಸಿಕ್ಕಿದ್ದು ಹಳಸಲು ಅನ್ನ ಮಾತ್ರ.
ನಕ್ಸಲ್ ಚಳವಳಿ ಪ್ರಾರಂಭವಾದ ನಂತರದಲ್ಲಿ ಕೂಲಿ ಕಾರ್ಮಿಕರ ವೇತನ ಸುಧಾರಣೆ ಆಗಿರುವುದು ಹಾಗೂ ಶಾಲೆ, ರಸ್ತೆ, ಕುಡಿಯುವ ನೀರು, ಸೋಲಾರ್ ಸೇರಿದಂತೆ ಒಂದಷ್ಟು ಅಭಿವೃದ್ಧಿ ಆಗಿರುವುದೂ ಸುಳ್ಳಲ್ಲ.
ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ನಕ್ಸಲ್ ನಿಗ್ರಹ ದಳ ಸಾಕಷ್ಟು ಜನಪರವಾಗಿ, ಹಳ್ಳಿವಾಸಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ. ಮೊದಲಿದ್ದ ಪೊಲೀಸರ ಮೇಲಿದ್ದ ಭಯ, ಧ್ವೇಷ ಬಹುತೇಕ ನಾಶವಾಗಿ ಜನರು ಹಾಗೂ ನಕ್ಸಲ್ ನಿಗ್ರಹ ದಳದ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಅಲ್ಲಿನ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಕಷ್ಟದ ಸಮಯದಲ್ಲಿ ಊರಿನವರಿಗೆ ಸಹಾಯ ಹಸ್ತ ನೀಡುವ ಕಾರ್ಯವನ್ನು ಸಹ ಸಿಬ್ಬಂದಿಗಳು ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
ಕಳೆದ ಕೆಲವು ವರ್ಷಗಳಿಂದ ನಕ್ಸಲ್ ಪ್ಯಾಕೇಜ್ ಹೆಸರಿನಲ್ಲಿ ಸಾಕಷ್ಟು ಜನ ಮುಖ್ಯವಾಹಿನಿಗೆ ಬಂದರು, ಆದರೆ ನಕ್ಸಲರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಂಡ ನಮ್ಮ ಆಡಳಿತ ವ್ಯವಸ್ಥೆಗೆ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಹುಟ್ಟಲು ಕಾರಣವಾದ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಹೆಚ್ಚಿನ ಗಮನ ವಿದ್ದಂತೆ ಕಾಣುತ್ತಿಲ್ಲ. ಇನ್ನೂ ದುಃಖದ ಸಂಗತಿ ಎಂದರೆ ಮಲೆನಾಡಿಗರ ಬದುಕು ಕಿತ್ತುಕೊಳ್ಳುವ ಸೆಕ್ಷನ್(4), ಕಸ್ತೂರಿ ರಂಗನ್ ಯೋಜನೆ, ಹುಲಿ ಯೋಜನೆ ಇನ್ನೂ ಹತ್ತು ಹಲವು ಹೊಸ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯ ಪ್ರವೃತ್ತವಾಗಿವೆ. ಇವುಗಳು ಇನ್ನೆಷ್ಟು ಜನರ ಮನೆ, ಬದುಕನ್ನು ಕಿತ್ತುಕೊಂಡು ಮತ್ತೊಬ್ಬ ಬಂದೂಕುದಾರಿ ಹುಟ್ಟಲು ಕಾರಣವಾಗುತ್ತವೆಯೋ ಸಧ್ಯ ಅರಿವಿಗೆ ಬಾರದ ವಿಷಯವಾಗಿದೆ.
ಈ ಹಿಂದೆಯೂ ಬಂದೂಕು ಹಿಡಿದವರು ನಕ್ಸಲರು. ನಾವು ಆ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮಾರ್ಗದ ಹೋರಾಟಗಳನ್ನು ವಿರೋಧಿಸಬೇಕು. ಆದರೆ ಬಂದೂಕು ಹಿಡಿಸಿದ್ದು ನಮ್ಮ ಆಡಳಿತ ವ್ಯವಸ್ಥೆ ಎಂಬ ಸೆರಗಿನೊಳಗಿನ ಕೆಂಡದಂತಹ ಸತ್ಯ ಎಂಬುದನ್ನು ಮರೆಯಬಾರದು.
ಓರ್ವ ಅವಿದ್ಯಾವಂತ, ಅಥವಾ ಸಾಮಾನ್ಯ ನಾಗರೀಕ ಕಾನೂನಿನ ಮೇಲೆ ನಂಬಿಕೆ ಕಳೆದುಕೊಂಡು ಅಥವಾ ಕಾನೂನಿನ ಚೌಕಟ್ಟನ್ನು ಮೀರಿ ಯಾವುದಾದರೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾದರೆ ಅದು ತೀರಾ ಯೋಚಿಸಬೇಕಾದ ವಿಷಯ ಅನಿಸುವುದಿಲ್ಲ. ಆದರೆ ಓರ್ವ ಕಾನೂನು ಪದವಿ ಪಡೆದಾತ ತಾನು ಶಸ್ತ್ರ ಹಿಡಿದು ಈ ಕಾನೂನಿನ ವಿರುದ್ಧವೇ ನಿಂತು ಹೋರಾಡಿದರೆ ಮಾತ್ರ ನ್ಯಾಯ ದೊರಕಲು ಸಾಧ್ಯ ಎಂಬ ನಿರ್ಧಾರಕ್ಕೆ ಬರುತ್ತಾನೆ ಎಂದರೆ ನಕ್ಸಲ್ ಚಳುವಳಿ ಮಲೆನಾಡಿನಲ್ಲಿ ಹುಟ್ಟಲು ಕಾರಣವಾದ ಆಡಳಿತ ವ್ಯವಸ್ಥೆ ಹಾಗೂ ಕಾನೂನಿನ ಬಗೆಗಿನ ಅಪನಂಬಿಕೆಗೆ ಕಾರಣವನ್ನು ಹುಡುಕುವ ಅನಿವಾರ್ಯತೆ ಜೊತೆಗೆ ಇಂದಿನ ಅವೈಜ್ಞಾನಿಕ ಯೋಜನೆಗಳ ಬಗೆಗೆ ಪರಾಮರ್ಶಿಸುವ ಅವಶ್ಯಕತೆ ಖಂಡಿತಾ ಇದೆ ಎನಿಸುತ್ತದೆ.

0 Comments