ಚಿಕ್ಕಮಗಳೂರು : ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಘಟನೆ ಮೂಡಿಗೆರೆಯ ಬಿದ್ರುತಳ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನ ಅರಣ್ಯ ಪ್ರದೇಶದ  ಮದ್ಯವಿರುವ ಬಿದ್ರುತಳ ಗ್ರಾಮಕ್ಕೆ ಕೆಲಸಕ್ಕೆಂದು ಹೋದ ವ್ಯಕ್ತಿಯೋರ್ವರು ನಾಪತ್ತೆಯಾದ  ಘಟನೆ ನಡೆದಿದೆ.  ಬಾಳೂರಿನ ನಾಗೇಶ್ ಆಚಾರ್ ಎಂಬ 46 ವರ್ಷ ವಯಸ್ಸಿನ ವ್ಯಕ್ತಿ ಕಾಣೆಯಾದವರು ಎಂದು ತಿಳಿದುಬಂದಿದೆ. ಮೂರುದಿನಗಳ ಹಿಂದೆ ಬಿದ್ರುತಳ ಗ್ರಾಮಕ್ಕೆ ಕೆಲಸದವರ ಜೊತೆಗೂಡಿ ಕೆಲಸಕ್ಕೆಂದು ಹೋಗಿದ್ದವರು, ಶನಿವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ನಾಗೇಶ್ ಆಚಾರ್ ಅವರ ಪತ್ನಿ ಸುಮ ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಭಾನುವಾರ ಮತ್ತು ಸೋಮವಾರ ಪೊಲೀಸರು, ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಬಾಳೂರಿನ ಗ್ರಾಮಸ್ಥರು ಸೇರಿ ಬಿದ್ರುತಳ ಗ್ರಾಮದಲ್ಲಿ ಹುಡುಕಾಟ ನಡೆಸಿದ್ದರೂ ಕಾಣೆಯಾದ ವ್ಯಕ್ತಿ ನಾಗೇಶ್ ಆಚಾರ್ ಅವರು ಈ ವರೆಗೆ ಪತ್ತೆಯಾಗಿಲ್ಲ.

ಕಾಡು ಪ್ರಾಣಿಗಳು ಎಲ್ಲಾದರು ಹೊತ್ತುಕೊಂಡು ಹೋಗಿ ತಿಂದಿರಬಹುದು ಎಂಬ ಅನುಮಾನವೂ ಸಹ ಒಂದೆಡೆ ವ್ಯಕ್ತವಾಗಿದೆ. ಘಟನೆಯ ಕುರಿತಾಗಿ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸಹ ಈ ಕುರಿತಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೊತೆಗೆ ಕೆಲಸಕ್ಕೆಂದು ಕರೆದುಕೊಂಡು ಹೋದ ವ್ಯಕ್ತಿಗಳನ್ನು ಬಾಳೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ನಾಪತ್ತೆಯಾಗಿರುವ ನಾಗೇಶ್ ಆಚಾರ್ ಅವರನ್ನು ನೆನೆದು ಅವರ ಪತ್ನಿ ಹಾಗೂ ಕುಟುಂಬಸ್ಥರು ಚಿಂತೆಯಲ್ಲಿದ್ದಾರೆ. ಅತಿಶೀಘ್ರವಾಗಿ ನಾಪತ್ತೆಯಾಗಿರುವ ವ್ಯಕ್ತಿ ನಾಗೇಶ್ ಆಚಾರ್ ಅವರನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.