ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರ ದತ್ತಾತ್ರೇಯ ಪೀಠಕ್ಕೆ ಶ್ರೀ ರಾಮ ಸೇನೆಯ ಕಾರ್ಯಕರ್ತರು ಶ್ರದ್ಧಾ ಭಕ್ತಿಯಿಂದ ತೆರಳಿ ದತ್ತ ಪಾದುಕೆಯ  ದರ್ಶನ ಪಡೆದರು. 

ರಾಜ್ಯದ ವಿವಿಧ ಮೂಲೆಗಳಿಂದ ಪವಿತ್ರ ದತ್ತಮಾಲೆಯನ್ನು ಧರಿಸಿ ಆಗಮಿಸಿದ ದತ್ತ ಭಕ್ತರು, ಸರತಿ ಸಾಲಿನಲ್ಲಿ ನಿಂತು ಜೈ ಶ್ರೀರಾಮ್, ಜೈ ಗುರು ದತ್ತಾತ್ರೇಯ ಎಂಬ ಹಲವಾರು ಘೋಷಣೆಗಳೊಂದಿಗೆ ಗುರು ದತ್ತಾತ್ರೇಯರ ಗುಹೆಯನ್ನು ಪ್ರವೇಶಿಸಿ ದತ್ತ ಪಾದುಕೆಗಳ ದರ್ಶನ ಪಡೆದರು. 

ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕಣ್ಗಾವಲು :

ಚಂದ್ರದ್ರೋಣ ಪರ್ವತ ದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಮಾರ್ಗದ ಹಲವೆಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿತ್ತು, ಹಾಗೂ ದತ್ತ ಪೀಠದ ಸುತ್ತಲೂ ಮತ್ತು ಗೋರಿಗಳಿರುವ ಜಾಗದಲ್ಲಿ ಪೋಲಿಸ್ ನಿಯೋಜನೆ ಮಾಡಲಾಗಿತ್ತು. ಇದಲ್ಲದೆ ಆಯಕಟ್ಟಿನ  ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ನಿಯೋಜನೆಗೊಳಿಸಿ ಯಾವುದೇ ರೀತಿಯ ಭದ್ರತಾ ಸಮಸ್ಯೆಗಳು ಉಂಟಾಗದಂತೆ ಕ್ರಮ ಕೈಗೊಂಡಿದ್ದರು.

ದತ್ತಪೀಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ತುರ್ತಾಗಿ ಚಿಕಿತ್ಸೆ ನೀಡುವ ಸಲುವಾಗಿ ಸೂಕ್ತ ವೈದ್ಯಕೀಯ ತಂಡವನ್ನು ಹಾಗೂ ಆಂಬುಲೆನ್ಸ್ ವ್ಯವಸ್ಥೆಯನ್ನು ಜಿಲ್ಲಾಡಳಿತ ದತ್ತಪೀಠದಲ್ಲಿ ಕಲ್ಪಿಸಿತ್ತು. 

ಬಸ್ ಮೇಲೆ ಕಲ್ಲು ತೂರಾಟ, ಮುತಾಲಿಕ್ ಖಂಡನೆ:

ನಿನ್ನ ತಡರಾತ್ರಿ ಕೋಲಾರದಿಂದ ದತ್ತಪೀಠಕ್ಕೆ ತೆರಳುತ್ತಿದ್ದ ದತ್ತ ಭಕ್ತರಿದ್ದ ವಾಹನವನ್ನು ತಡೆದ ಕೆಲ ಮುಸಲ್ಮಾನರು, ಹಿಂದೂ ಕಾರ್ಯಕರ್ತರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ವಿಚಾರವನ್ನು ಖಂಡಿಸಿದ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಕೋಲಾರದ ಪೊಲೀಸ್ ಅಧಿಕಾರಿಗಳು ಶೀಘ್ರವಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ದತ್ತ ಮಾಲೆಯನ್ನು ತೆಗೆದನಂತರ ಕೋಲಾರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು. 

ಡಿ.08 ರಿಂದ 19 ರ ವರೆಗೆ ಬಜರಂಗದಳ ವತಿಯಿಂದ ದತ್ತಮಾಲಾ ಅಭಿಯಾನ :

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಡಿಸೆಂಬರ್ 8ರಿಂದ ದತ್ತಮಾಲಾ ಅಭಿಯಾನವು ಆರಂಭಗೊಳ್ಳಲಿದೆ.

ದತ್ತ ಮಾಲೆಯನ್ನು ಧರಿಸಿ ವ್ರತಾಚರಣೆಯನ್ನು ನಡೆಸಿ, ಡಿಸೆಂಬರ್ 19 ರಂದು ಬಜರಂಗದಳದ ಕಾರ್ಯಕರ್ತರು ದತ್ತಮಾಲಾಧಾರಿಗಳಾಗಿ ದತ್ತಪೀಠಕ್ಕೆ ಆಗಮಿಸಲಿದ್ದಾರೆ. ದತ್ತ ಜಯಂತಿಯ ಅಂಗವಾಗಿ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ವಿಶೇಷ ಹೋಮ-ಹವನಗಳು ನೆರವೇರಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ.