ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಕೆಲವು ದಿನಗಳಷ್ಟೇ ಬಾಕಿ ಇದೆ. ಈ ಬಾರಿ  ಮೂಡಿಗೆರೆಯ ನಿವಾಸಿ ಸುಂದರ್ ಬಂಗೇರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದಾರೆ. ಖಾಸಗಿ ಪತ್ರಿಕೆಯ ಸಂಪಾದಕರಾದ ಹಳೆಕೋಟೆ ಸುಂದರ ಬಂಗೇರ ಅವರು ಸಾಹಿತಿ ಕೂಡ ಹೌದು. ನಾಲ್ಕೈದು ಭಾಷೆಗಳಲ್ಲಿ ಕಥೆ, ಕವನಗಳನ್ನು, ರಚಿಸಿದ್ದಾರೆ.


ನ.21 ರಂದು ನಡೆಯುವ ಕ.ಸಾ.ಪ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರೆ ಚಿಕ್ಕಮಗಳೂರು ನಗರದ ಎರಡು ಎಕರೆ ಜಾಗದಲ್ಲಿ ಅತ್ಯಾಧುನಿಕ ಕನ್ನಡ ಭವನದ ನಿರ್ಮಾಣ ಮಾಡುವುದಾಗಿ ಜನರಿಗೆ ಆಶ್ವಾಸನೆ ನೀಡಿದ್ದಾರೆ. ಪ್ರಸ್ತುತ ರತ್ನಗಿರಿ ಬೋರೆಯಲ್ಲಿ ಇರುವ ಕನ್ನಡ ಭವನಕ್ಕೆ ಸಮರ್ಪಕವಾದ ರಸ್ತೆ ಹಾಗೂ ವಾಹನ ನಿಲುಗಡೆಗೆ ಸ್ಥಳ ಇಲ್ಲದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 45 ವರ್ಷಗಳ ಹಿಂದೆ ನಡೆದಿತ್ತು, ಒಂದು ವೇಳೆ ಈ ಬಾರಿ ಬಂಗೇರ ಅವರು ಗೆದ್ದರೆ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ತಿಳಿಸಿದ್ದಾರೆ. ಈ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸುವುದರಿಂದ ಹಲವಾರು ಪ್ರವಾಸಿ ತಾಣಗಳು ಜನರಿಗೆ ಮನದಟ್ಟಾಗುತ್ತದೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಎಲೆಮರೆಯ ಕಾಯಿಯಂತೆ ಇರುವ ಜಿಲ್ಲೆಯ ಹಲವಾರು ಸಾಹಿತಿಗಳನ್ನು ಹಾಗೂ ಕಲಾವಿದರನ್ನು ಗುರುತಿಸಿ ಅವರನ್ನು ಬೆಳಕಿಗೆ ತಂದು ಅವರ ಪ್ರತಿಭೆಯ ಅನಾವರಣ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.

ಜಾನಪದ, ಸಾಹಿತ್ಯ, ಯಕ್ಷಗಾನ ಸಾಹಿತ್ಯ, ಕೋಲಾಟ ಮುಂತಾದ ನಮ್ಮ ಸಂಸ್ಕೃತಿ ಹಾಗೂ ಸೊಗಡನ್ನು ಬಿಂಬಿಸುವ ಕಲೆಗಳ ಬೆಂಬಲವಾಗಿ ಅದಕ್ಕೆ ಪೂರಕವಾಗಿ ಬೇಕಾಗುವ ಎಲ್ಲಾ ಕೆಲಸಗಳನ್ನು ಮಾಡುವ ಭರವಸೆ ನೀಡಿದ್ದಾರೆ.

ಯುವ ಬರಹಗಾರರಿಗೆ, ವರದಿಗಾರಿಕೆ, ಲೇಖನಗಳ ಕುರಿತಾದ ಮಾಹಿತಿ ನೀಡುವುದು, ಬರವಣಿಗೆಯ ಕುರಿತಾದ ಸಮಗ್ರ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ಆಯೋಜನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಸಾಹಿತಿಗಳು ತಾವು ರಚನೆ ಮಾಡಿದ ಕೃತಿಗಳನ್ನು ಪ್ರಕಟಣೆ ಮಾಡಲು ಬೇಕಾಗುವ ಪ್ರೋತ್ಸಾಹಧನ ನೀಡುವಂತಹ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.