ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಭದ್ರಾ ವನ್ಯಜೀವಿ ಪರಿಪಾಲಕ ಭದ್ರಾವತಿಯ ಗಣೇಶ್ ಇಂದು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ವನ್ಯಜೀವಿ ಹಾಗೂ ಅರಣ್ಯದ ಮೇಲೆ ಅತೀವವಾದ ಪ್ರೀತಿ ಮತ್ತು ಮಾಡುವ ಕೆಲಸದಲ್ಲಿ ಶ್ರದ್ಧೆ ಹೊಂದಿದ್ದ ಗಣೇಶ್ ಅವರು ಒಂದೆಡೆ ಬೆಂಗಳೂರಿನಲ್ಲಿ ಉದ್ಯಮಿಯಾಗಿ ಇನ್ನೊಂದೆಡೆ ಹಲವು ವರ್ಷಗಳ ಕಾಲ ನಿರಂತರವಾಗಿ ಅರಣ್ಯ ಪರಿಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರ ಅಗಲುವಿಕೆಯ ಬಹಳಷ್ಟು ಜನರಿಗೆ ಬೇಸರ ತರಿಸಿದೆ. ಉತ್ತಮ ಸ್ವಭಾವದ ವ್ಯಕ್ತಿಯಾಗಿದ್ದ ಗಣೇಶ್ ಅವರು ಎಲ್ಲಾ ವಯೋಮಾನದವರಿಗೂ ಪ್ರಿಯವಾಗಿದ್ದರು.
ಇತ್ತೀಚೆಗಷ್ಟೆ ಭದ್ರಾ ಅಭಯಾರಣ್ಯಕ್ಕೆ ಗಣ್ಯರಿಂದ ಬಹಳ ದೊಡ್ಡ ಮೊತ್ತದ ಅನುದಾನ ತರುವಲ್ಲಿ ಮಹತ್ತರವಾದ ಪಾತ್ರವನ್ನು ಗಣೇಶ್ ಅವರು ವಹಿಸಿಕೊಂಡಿದ್ದರು. ಭದ್ರಾ ಅರಣ್ಯದ ಸಫಾರಿಯನ್ನು ಉತ್ತೇಜಿಸುವ ಕಾರಣದಿಂದಾಗಿ ಕನ್ನಡ ಚಿತ್ರರಂಗದ ನಟರಾದ ದರ್ಶನ್, ವಿಜಯರಾಘವೇಂದ್ರ ಮುಂತಾದ ಹೆಮ್ಮೆಯ ನಟರನ್ನು ಕರೆಸಿದ್ದರು. ಸರ್ಕಾರದಿಂದ ಭದ್ರಾ ವನ್ಯಜೀವಿ ವಿಭಾಗಕ್ಕೆ ಅನುದಾನ ತರಲು ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಆದರೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಮಯದಲ್ಲಿ ಗಣೇಶ್ ಅವರು ಬಾರದ ಲೋಕಕ್ಕೆ ತೆರಳಿರುವುದು ಎಲ್ಲರಲ್ಲೂ ದುಃಖ ಉಂಟುಮಾಡಿದೆ.

0 Comments