ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಜಾತ್ಯಾತೀತ ಜನತಾದಳ ಪಕ್ಷದ ಚಿಕ್ಕಮಗಳೂರಿನ ಮುಖಂಡ ಹಾಗೂ  ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿದ್ದ  ಹೆಚ್ ಹೆಚ್ ದೇವರಾಜ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರಲು ಮುಂದಾಗಿದ್ದಾರೆ. ಈ ಕುರಿತಾಗಿ ತಮ್ಮ ಅಪ್ತವಲಯ ಹಾಗೂ ಕೆಪಿಸಿಸಿಯ ಕೆಲ ಮುಖಂಡರೊಂದಿಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಪಕ್ಷದೊಳಗಿನ ಕೆಲ ಅಡೆತಡೆಗಳು ಹಾಗೂ ಕೆಲ ಅಸಮಾಧಾನದಿಂದಾಗಿ ಅವರು ಈ ನಿರ್ಣಯವನ್ನು ಕೈಗೊಂಡಿರುವುದಾಗಿ ತಿಳಿದುಬಂದಿದೆ. ಡಿಸೆಂಬರ್ ತಿಂಗಳ ಮೂರನೇ ತಾರೀಕಿನಂದು ನಡೆಯುವ ಕಾಂಗ್ರೆಸ್ ನ ವಿಧಾನ ಪರಿಷತ್ ಚುನಾವಣಾ ಮತದಾರರ ಸಮಾವೇಶದಲ್ಲಿ ದೇವರಾಜ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ರಾಜ್ಯಮಟ್ಟದಲ್ಲಿ ನಡೆದ ಜೆಡಿಎಸ್ ಪಕ್ಷದ ಚಿಂತನ ಮಂಥನ ಸಭೆಗೆ ದೇವರಾಜ್ ಅವರಿಗೆ ಪಕ್ಷವು ಆಹ್ವಾನ ನೀಡಿರಲಿಲ್ಲ, ಹಿಂದಿನಿಂದಲೂ ಕೂಡ ತಮ್ಮದೇ ಶೈಲಿಯಲ್ಲಿ ಪಕ್ಷದ ಯಾವುದೇ ನಿರ್ಬಂಧಗಳು ಕಿವಿಗೊಡದೆ ಪಕ್ಷದ ಕೆಲ ಆದೇಶಗಳನ್ನು ಪಾಲಿಸದೆ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದರು. ಹಲವಾರು ಸಂಘಟನೆಯ ಪ್ರತಿಭಟನೆಗಳಲ್ಲಿ ಹೋಗಿ ಪಾಲ್ಗೊಳ್ಳುತ್ತಿದ್ದರು. ಜೆಡಿಎಸ್ ಪಕ್ಷಕ್ಕಾಗಿ ಬಹಳ ಶ್ರಮವಹಿಸಿದ್ದರು.  ಆದರೆ ಪಕ್ಷದ ಕೆಲ ಆಂತರಿಕ ಚಟುವಟಿಕೆಗಳಿಂದಾಗಿ ಬೇಸರ ತಂದುಕೊಂಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಲು ಮುಂದಾಗಿದ್ದಾರೆ.

ಜಿಲ್ಲೆಯ ಪ್ರಭಾವಿ ಜೆಡಿಎಸ್ ನಾಯಕರಾಗಿದ್ದ ದೇವರಾಜ್ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲಿದ್ದಾರೆ. ಅವರ ಈ ನಡೆ ಕೆಲವರಿಗೆ ಬೇಸರ ತರಿಸಿದ್ದರೆ ಇನ್ನೂ ಕೆಲವರಲ್ಲಿ ಸಂತಸ ಉಂಟುಮಾಡಿದೆ.