ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬ್ಯಾಂಕ್ ಗಳು ರೈತರ ಕುರಿತಾಗಿ ಯೋಚನೆ ಮಾಡದೆಯೇ ಆರ್ಥಿಕ ಸ್ವತ್ತುಗಳ ಸ್ಥಿರೀಕರಣ ಹಾಗೂ ಭದ್ರತಾ ಹಿತಾಸಕ್ತಿ ಕಾಯ್ದೆಯ ಅಡಿಯಲ್ಲಿ ರೈತರ ಜಮೀನನ್ನು ವಶ ಪಡಿಸಿಕೊಳ್ಳಲು ಮುಂದಾದರೆ ಬ್ಯಾಂಕ್ ಗಳ ಮುಂದೆಯೇ ಪ್ರತಿಭಟನೆ ನಡೆಸಲಾಗುವುದು ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಮಲೆನಾಡಿನ ಭಾಗದ ರೈತರು ಪ್ರತೀ ವರ್ಷವೂ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಲೆ ಇದ್ದಾರೆ, ಅವರ ನೋವುಗಳಿಗೆ ಸ್ಪಂದಿಸುವ ಬದಲಾಗಿ ಸರ್ಫೆಸಿ ಕಾಯ್ದೆಯ ಅಡಿಯಲ್ಲಿ ಅವರ ಜಮೀನು ವಶಪಡಿಸಿಕೊಳ್ಳುವುದು ಸಮಂಜಸವಲ್ಲ, ಆ ರೀತಿಯ ಘಟನೆಗಳು ನಡೆದ ಕುರಿತಾಗಿ ವಿಷಯ ಬಂದರೆ ನೇರವಾಗಿ ಸಂಬಂಧಿಸಿದ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂಬ ನೇರ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರಬಾರದು ಮತ್ತು ಮುಂದಿನ ಎರಡು ವರ್ಷಗಳ ಕಾಲ ಬೆಳೆಗಾರರಿಂದ ಸಾಲ ವಸೂಲಿ ಮಾಡಲು ಮುಂದಾಗಬಾರದು, ಎರಡು ವರ್ಷಗಳು ಕಳೆದ ನಂತರ ಕೊಟ್ಟ ಅಸಲು ಹಣವನ್ನು ವಾಪಸ್ ಪಡೆಯುವ ಕುರಿತಾಗಿ ಕ್ರಮ ವಹಿಸಬೇಕು ಎಂದರು.
ತೋಟಗಳ ನಿರ್ವಹಣೆಗಾಗಿ ಬ್ಯಾಂಕ್ ಸಾಲ ನೀಡಬೇಕು :
ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ತೋಟಗಳ ನಿರ್ವಹಣೆಗಾಗಿ ಬ್ಯಾಂಕ್ ಗಳು ಸಾಲ ನೀಡಬೇಕು ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮಲೆನಾಡು ಭಾಗ ಸೇರಿದಂತೆ ಹಲವೆಡೆಗಳಲ್ಲಿ ರೈತರು ಬೆಳೆದ ಬೆಳೆಗಳು ಹಾಳಾಗಿವೆ. ಈ ಸಲುವಾಗಿ ಯಾವುದೇ ಕಾರಣಕ್ಕೂ ಸರ್ಫೇಸಿ ಕಾಯ್ದೆ ಅನ್ವಯವಾಗದಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವ ಸಲುವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

0 Comments