ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ, ಶಾರದೆಯ ನೆಲೆಬೀಡಾದ ಶೃಂಗೇರಿಯಲ್ಲಿ ದೀಪಾವಳಿ ಹಬ್ಬದ ಆಚರಣೆಯು ಬಹಳ ಅದ್ದೂರಿಯಾಗಿ ನಡೆದಿದೆ. ಅದರಲ್ಲೂ ಈ ಬಾರಿಯ ದೀಪಾವಳಿಯನ್ನು ಊರಿನ ಜನರು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಅಚ್ಚುಕಟ್ಟಾಗಿ, ಅದ್ಭುತವಾಗಿ ಶೃಂಗೇರಿ ಪೊಲೀಸ್ ಠಾಣೆಯ ಅಧಿಕಾರಿವರ್ಗ ಮತ್ತು ಸಿಬ್ಬಂದಿಗಳು ಆಚರಿಸಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿಯನ್ನು ಕುಟುಂಬದ ಸದಸ್ಯರೊಂದಿಗೆ ಆಚರಿಸಬೇಕೆಂದು ದೇಶದ ವಿವಿಧ ಮೂಲೆಗಳಲ್ಲಿರುವ ಕುಟುಂಬಗಳ ಸದಸ್ಯರು ತಮ್ಮ ಮನೆಗೆ ಹಿಂದಿರುಗುತ್ತಾರೆ. ಆದರೆ ಸದಾ ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಆರಕ್ಷಕ ಪಡೆಯ ಸಿಬ್ಬಂದಿಗಳು ಶೃಂಗೇರಿಯ ಆನೆಗುಂದದಲ್ಲಿರುವ ವೃದ್ಧಾಶ್ರಮದಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ಆಚರಣೆಯನ್ನು ಮಾಡಿದ್ದಾರೆ.

ಹಬ್ಬಗಳನ್ನು ಅರ್ಥಪೂರ್ಣವಾಗಿ ಸಮಾಜದೊಂದಿಗೆ ಆಚರಿಸುವುದರಲ್ಲಿ ಮೊದಲಿನಿಂದಲೂ ನನಗೆ ಸಂತಸವಿದೆ. ನಮ್ಮ ಠಾಣೆಯ ಸಿಬ್ಬಂದಿಗಳೊಂದಿಗೆ ನಾವು ಆಶ್ರಮದಲ್ಲಿ ಕಳೆದ ಸಮಯವು ಸದಾ ಹಚ್ಚಹಸಿರಾಗಿ ಎಲ್ಲರ ಮನಸ್ಸಿನಲ್ಲಿ ಇರುತ್ತದೆ. ಎಲ್ಲರೂ ಸಮಾಜದೊಂದಿಗೆ ಬೆರೆಯುವ ದೃಢ ಸಂಕಲ್ಪವನ್ನು ಮಾಡಬೇಕಿದೆ. - ರವಿ ಬಿಎಸ್ ವೃತ್ತ ನಿರೀಕ್ಷಕರು ಶೃಂಗೇರಿ ಪೊಲೀಸ್ ಠಾಣೆ.

ವೃದ್ಧರೊಂದಿಗೆ ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚಿ, ದೇವರನ್ನು ಸ್ತುತಿಸಿ, ಅವರಿಗೆ ಸಿಹಿಯನ್ನು ತಿನ್ನಿಸಿ ಬಹಳ ಅಚ್ಚುಕಟ್ಟಾಗಿ ಮಾನವೀಯ ಮೌಲ್ಯಗಳೊಂದಿಗೆ ಈ ಬಾರಿಯ ದೀಪಾವಳಿ ಹಬ್ಬದ ಆಚರಣೆಯನ್ನು ಅರ್ಥಪೂರ್ಣವಾಗಿ ಮಾಡಿದ ಶ್ರೇಯಸ್ಸು ಶೃಂಗೇರಿಯ ಪೊಲೀಸ್ ಸಿಬ್ಬಂದಿಗಳಿಗೆ ಸಲ್ಲುತ್ತದೆ.

ಹಬ್ಬದ ಆಚರಣೆಗೆ ಪ್ರಾಮುಖ್ಯತೆಯನ್ನು ನೀಡಿ ಅರ್ಥಪೂರ್ಣವಾಗಿ ವಯೋ ವೃದ್ದರೊಂದಿಗೆ ಹಬ್ಬದ ಆಚರಣೆಯನ್ನು ಮಾಡಿ ಒಂದಿಲ್ಲೊಂದು ಆಲೋಚನೆಗಳಲ್ಲಿ ಸದಾ ಮನಸನ್ನು ತೊಡಗಿಸಿಕೊಂಡಿರುವ ವೃದ್ಧರ ಮನಸನ್ನು ಉಲ್ಲಾಸಭರಿತಗೊಳಿಸಿ, ಅವರ ಜೊತೆಗೆ ಒಂದಿಷ್ಟು ಕಾಲ ಕಳೆದು ಅತ್ಯಂತ ಉತ್ತಮವಾಗಿ ಹಬ್ಬವನ್ನು ಈ ಬಾರಿ ಶೃಂಗೇರಿ ಪೊಲೀಸರು ಆಚರಿಸಿದ್ದಾರೆ. ಊರಿನ ಜನರೂ ಸಹ ಪೊಲೀಸರ ಅರ್ಥಪೂರ್ಣ ಆಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.