ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಸುಸಜ್ಜಿತ ನೂರು ಬೆಡ್ ಆಸ್ಪತ್ರೆ ಶೃಂಗೇರಿಯಲ್ಲಿ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಈ ಹಿಂದಿನ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಸದಸ್ಯರು ಇಂದು ತಾಲೂಕಿನ ಎಲ್ಲಾ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳಿಗೆ ಮುಂಬರುವ ವಿಧಾನಪರಿಷತ್ ಚುನಾವಣೆಯನ್ನು ಬಹಿಷ್ಕರಿಸುವಂತೆ ಮನವಿ ಸಲ್ಲಿಸಿದರು. ಚುನಾವಣಾ ಬಹಿಷ್ಕಾರ ನಿರ್ಧಾರ ಸಾರ್ವಜನಿಕರದ್ದಾಗಿದ್ದು ಅದಕ್ಕೆ ಹೋರಾಟ ಸಮಿತಿ ಬೆಂಬಲ ಸೂಚಿಸಿರುವುದಾಗಿಯೂ. ಹಾಗೆಯೇ ಹೋರಾಟ ಸಮಿತಿ ಮೂಲಕ ಜನರ ಈ ಮನವಿಯನ್ನು ಜನಪ್ರತಿನಿಧಿಗಳಿಗೆ ತಲುಪಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ 22 ರಂದು ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಹೋರಾಟ ಸಮಿತಿಯು ಕರೆ ನೀಡಿ ಶೃಂಗೇರಿ ಬಂದ್ ಯಶಸ್ವಿಗೊಳಿಸಿತ್ತು. ಅಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದ ಅಧಿಕಾರಿಗಳು ತ್ವರಿತ ಗತಿಯಲ್ಲಿ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು, ಹಾಗೂ ಕೆಲವು ದಿನಗಳ ಬಳಿಕ ಖುದ್ದಾಗಿ ಶೃಂಗೇರಿಗೆ ಆಗಮಿಸಿದ ಚಿಕ್ಕಮಗಳೂರಿನ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರು ಒಂದು ತಿಂಗಳ ಒಳಗಾಗಿ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ನೀಡಿದ್ದರು. ಒಂದು ತಿಂಗಳುಗಳಾದರೂ ಕೂಡ ಆಸ್ಪತ್ರೆಯ ಜಾಗ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳ್ಳದಿರುವ ಕಾರಣ ಮುಂಬರುವ ವಿಧಾನ ಪರಿಷತ್ ಚುನಾವಣೆಯನ್ನು ಬಹಿಷ್ಕಾರ ಮಾಡಬೇಕೆಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ತಾಲೂಕಿನ ಎಲ್ಲಾ ಪಕ್ಷಗಳ ಚುನಾಯಿತ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದೆ.
ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಗಣಿಸದೆ ಹೋದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡಲು ಸಿದ್ದರಿರುವುದಾಗಿ ಸಾರ್ವಜನಿಕ ವಲಯದಿಂದ ಕೂಗು ಕೇಳಿಬಂದಿದೆ. ಆದಷ್ಟು ಶೀಘ್ರವಾಗಿ ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸಬೇಕೆಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಒತ್ತಾಯಿಸಿದೆ.

0 Comments